ಹೊನ್ನಾವರ : ಸಾಧನೆಗೆ ಯಾವುದೂ ಅಡ್ಡಿಯಾಗಲಾರದು. ದೈಹಿಕ ವೈಕಲ್ಯಗಳನ್ನು ಮೆಟ್ಟಿನಿಂತ ಅಸಾಧಾರಣ ಪ್ರತಿಭೆ ನಮ್ಮ ನಡುವೆ ಇರುವುದು ನಾವೆಲ್ಲರೂ ಸಂತಸ ಪಡುವ ವಿಚಾರ. ಅಂತಹ ಸಾಧಕರ ಸಾಲಿನಲ್ಲಿ ನಿಲ್ಲುವವನು ಹೊನ್ನಾವರದ ಸಮರ್ಥ ರಾವ್.
ಹೊನ್ನಾವರದ ಪ್ರತಿಭಾನ್ವಿತ ಸಮರ್ಥ.ಜೆ.ರಾವ್ ಮುಡಿಗೆ ಅಮೇರಿಕಾದ 2021 ಸಾಲಿನ “ಸೆಲೆಷ್ಟಿಯಲ್ ಮೈಂಡ್’ ಹೆಸರಿನ ಮತ್ತೊಂದು ಪ್ರಶಸ್ತಿ ಲಭ್ಯವಾಗಿದ್ದು ಪ್ರತಿಭೆಯನ್ನು ಅರಸಿ ಬಂದ ಈ ಪ್ರಶಸ್ತಿ ಬಗ್ಗೆ ಎಲ್ಲರೂ ಹೆಮ್ಮೆ ಪಡುವಂತಾಗಿದೆ.
ವಿಶ್ವದಲ್ಲಿ ಕೇವಲ ಇಬ್ಬರಿಗೆ ಮಾತ್ರ ಈ ಪ್ರಶಸ್ತಿಯನ್ನು ನೀಡಲಾಗಿದ್ದು ಸಮರ್ಥನ ಜೊತೆ ಉಗಾಂಡಾದ ವಾಸ್ವ ಬಝೀರ್ ಶರೀಫ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಈ ಪ್ರಶಸ್ತಿ 250 ಅಮೇರಿಕನ್ ಡಾಲರ್ ನಗದು
(18,500 ರೂಪಾಯಿ) ಹಾಗೂ ಪ್ರಶಸ್ತಿ ಪತ್ರವನ್ನೊಳಗೊಂಡಿದೆ. ಮೈಸೂರು ಮೂಲದ ಅಮೇರಿಕಾದಲ್ಲಿ ನೆಲೆಸಿರುವ ಕಾವ್ಯಶ್ರೀ ಮಲ್ಲಣ್ಣ ಅವರು ಸ್ಥಾಪಿಸಿದ ಪ್ರಶಸ್ತಿ ಇದಾಗಿದ್ದು ದೈಹಿಕ ವೈಕಲ್ಯಗಳನ್ನು ಮೀರಿ ಕ್ರೀಡಾ ರಂಗದಲ್ಲಿ ಅತ್ಯುತ್ತಮ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
ಚೆಸ್ ರಂಗದಲ್ಲಿ ಸಮರ್ಥನ ಸಾಧನೆ ಜಗತ್ತಿಗೇ ತಿಳಿದಿದ್ದು, 2017ರ ವಿಶ್ವ ಬ್ಲಿಟ್ ಚೆಸ್ ನಲ್ಲಿ ಚಿನ್ನದ ಪದಕ, 2019 ರಲ್ಲಿ ಬೆಳ್ಳಿಪದಕ, 2015 ರಿಂದ 2017 ವರೆಗೆ ಸತತ ಮೂರು ವರ್ಷ ಐ.ಪಿ.ಸಿ.ಎ.ಚೆಸ್ ಚಾಂಪಿಯನ್ ಶಿಪ್ ನಲ್ಲಿ ಕಂಚಿನ ಪದಕ ಜಯಿಸಿರುವ ಪ್ರತಿಭೆ 2020 ರಲ್ಲಿ ಫಿಡೆ ಆನ್ಲೈನ್ ಚೆಸ್ ಒಲಂಪಿಯಾಡ್ ನಲ್ಲಿ ಭಾರತದ ಸದಸ್ಯನಾಗಿ ಪಾಲ್ಗೊಂಡಿದ್ದುದು ಗಮನಾರ್ಹ.
“ಸೆರೆಬ್ರಲ್ ಪಾಲ್ಸಿ” ಎನ್ನುವ ತೊಂದರೆಯಿಂದ ಬಳಲುತ್ತಿರುವ ಸಮರ್ಥ ಸ್ವತಂತ್ರವಾಗಿ ನಡೆದಾಡಲೂ ಸಾಧ್ಯವಿಲ್ಲದ ಯುವಕ. ಪ್ರತಿಯೊಂದು ಚಟುವಟಿಕೆಗೂ ತಂದೆ ತಾಯಿಯನ್ನು ಅವಲಂಬಿಸಿರುವ ಈತನ ಅಸಾಧಾರಣ ಬುದ್ಧಿಮತ್ತೆ, ಚುರುಕತನವನ್ನು ಹೊಂದಿದ್ದಾನೆ.
ಪ್ರಸ್ತುತ ಎಸ್.ಡಿ.ಎಂ ಕಾಲೇಜಿನಲ್ಲಿ ಬಿ.ಕಾಂ ಓದುತ್ತಿರುವ ಈತ ತನ್ನ ತಂಗಿ ಸಾನ್ವಿಯ ಸಹಾಯದಿಂದ ಪರೀಕ್ಷೆ ಬರೆಯುತ್ತಾನೆ. ಆದರೂ ಅತ್ಯುತ್ತಮ ಅಂಕಗಳಿಕೆಯೊಂದಿಗೆ ಶೈಕ್ಷಣಿಕವಾಗಿಯೂ ಹೆಜ್ಜೆಗುರುತು ಮೂಡಿಸುತ್ತಿದ್ದಾನೆ.