ಕಾರವಾರ : ಕಳೆದ ಮಾರ್ಚ್‌ನಲ್ಲಿ ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು ಏಪ್ರಿಲ್ ಹಾಗೂ ಮೇ ತಿಂಗಳಿನಲ್ಲಿ ಅಬ್ಬರಿಸಿತ್ತು. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹಾಗೂ ಸಾವನ್ನಪ್ಪುವವರ ಸಂಖ್ಯೆ ಸಹ ಅಧಿಕವಾಗಿ ಇಡೀ ಜಿಲ್ಲೆಯ ಜನರು ಆತಂಕ ದಿಂದಲೇ ಕಾಲ ಕಳೆಯುವಂತಾಗಿತ್ತು. ಇನ್ನು ಜೂನ್ ತಿಂಗಳಿನಲ್ಲಿ ಸೋಂಕಿನ ಪ್ರಮಾಣ ಕಡಿಮೆಯಾಗಿದ್ದು, ಜುಲೈ ತಿಂಗಳ ಪ್ರಾರಂಭದಲ್ಲಿ ಸೋಂಕಿನ ಪ್ರಮಾಣ ಸಾಕಷ್ಟು ಕಡಿಮೆಯಾಗಿದ್ದರಿಂದ ಕೊರೋನಾ ಮುಕ್ತ ಜಿಲ್ಲೆಯಾಗಲಿದೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಮತ್ತೆ ಕರೋನಾ ಮೂರನೇ ಅಲೆ ಪ್ರಾರಂಭವಾಗುತ್ತಿದ್ದು, ಕಳೆದ ಹತ್ತು ದಿನಗಳಿಂದ ಸೋಂಕಿತರ ಪ್ರಮಾಣ ಏರುತ್ತಲೇ ತೊಡಗಿದೆ.

ಕೊರೋನಾ ಮೂರನೇ ಅಲೆಯ ಭಯದಲ್ಲಿರುವ ಜಿಲ್ಲೆಯ ಜನರಿಗೆ ಕೊರೋನಾ ಸದ್ದಿಲ್ಲದೇ ಹೆಚ್ಚಾಗುತ್ತಿರುವುದು ಮಾತ್ರವೇ ಇನ್ನಷ್ಟು ಆತಂಕವನ್ನ ಸೃಷ್ಟಿ ಮಾಡಿದೆ. ಕಳೆದ ಹತ್ತು ದಿನಗಳಲ್ಲಿ 600ಕ್ಕೂ ಅಧಿಕ ಪ್ರಕರಣಗಳು ಜಿಲ್ಲೆಯಲ್ಲಿ ದಾಖಲಾಗಿದ್ದು 13 ಜನರ ಸೋಂಕಿನಿ೦ದ ಮೃತಪಟ್ಟಿದ್ದಾರೆ.

ಜೂನ್ 27 ರಂದು 57 ಪ್ರಕರಣ ಜಿಲ್ಲೆಯಲ್ಲಿ ದಾಖಲಾಗಿದ್ದರೆ, 28 ರಂದು 49 ಪ್ರಕರಣ, 29 ರಂದು 72 ಪ್ರಕರಣ, 30 ರಂದು 52 ಪ್ರಕರಣ, 31 ರಂದು 75 ಪ್ರಕರಣ, ಆಗಸ್ಟ್ 1 ರಂದು 44 ಪ್ರಕರಣ 2 ರಂದು 41 ಪ್ರಕರಣ, 3 ರಂದು 81 ಪ್ರಕರಣ, 4 ರಂದು 68 ಪ್ರಕರಣ ಹಾಗೂ ಆಗಸ್ಟ್ 5 ರ ಗುರುವಾರ 67 ಪ್ರಕರಣಗಳು ದಾಖಲಾಗಿದೆ.

RELATED ARTICLES  ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲ

ಒಟ್ಟು ಹತ್ತು ದಿನದ ಅವಧಿಯಲ್ಲಿ ಸುಮಾರು 606 ಪ್ರಕರಣಗಳು ದಾಖಲಾಗಿದ್ದರೆ, ಇತ್ತ ಒಟ್ಟು 13 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇನ್ನು ಜಿಲ್ಲೆಯ ಕರಾವಳಿ ಭಾಗದಲ್ಲಿಯೇ ಅಧಿಕ ಪ್ರಕರಣಗಳು ದಾಖಲಾಗುತ್ತಿದ್ದು ಕಳೆದ ಹತ್ತು ದಿನದಲ್ಲಿ ಕಾರವಾರ ತಾಲೂಕಿನಲ್ಲಿ 89 ಪ್ರಕರಣ ದಾಖಲಾಗಿದ್ದರೆ, ಅಂಕೋಲಾ ತಾಲೂಕಿನಲ್ಲಿ 94 ಪ್ರಕರಣ, ಕುಮಟಾ ತಾಲೂಕಿನಲ್ಲಿ ಅತಿಹೆಚ್ಚು 126 ಪ್ರಕರಣ, ಹೊನ್ನಾವರದಲ್ಲಿ 110 ಪ್ರಕರಣ ಹಾಗೂ ಭಟ್ಕಳದಲ್ಲಿ 53 ಪ್ರಕರಣ ದಾಖಲಾಗಿದೆ.

ಜಿಲ್ಲೆಯ ಘಟ್ಟದ ಮೇಲಿನ ತಾಲೂಕಿನಲ್ಲಿ ಶಿರಸಿ ಹೊರತು ಪಡಿಸಿ ಉಳಿದೆಲ್ಲಾ ತಾಲೂಕುಗಳಲ್ಲಿ ಕೊರೋನಾ ಸೋಂಕಿನ ಪ್ರಮಾಣ ನಿಯಂತ್ರಣದಲ್ಲಿದೆ ಎನ್ನಲಾಗಿದೆ. ಶಿರಸಿಯಲ್ಲಿ ಹತ್ತು ದಿನದಲ್ಲಿ 61 ಪ್ರಕರಣ ದಾಖಲಾಗಿದ್ದರೆ, ಸಿದ್ದಾಪುರದಲ್ಲಿ 20, ಮುಂಡಗೋಡಿನಲ್ಲಿ 13, ಯಲ್ಲಾಪುರದಲ್ಲಿ 31, ಹಳಿಯಾಲದಲ್ಲಿ 3 ಹಾಗೂ ಜೋಯಿಡಾದಲ್ಲಿ 4 ಪ್ರಕರಣಗಳು ದಾಖಲಾಗಿದೆ.

RELATED ARTICLES  ಗೋ ಹತ್ಯಾ ನೀಷೇಧಕ್ಕೆ ಆಗ್ರಹಿಸಿ 6000 ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆ ನಡೆಸಿದ ಮುಸ್ಲಿಂ

ಕಳೆದ ಬಾರಿ ಎರಡನೇ ಅಲೆಯಲ್ಲಿ ಜಿಲ್ಲೆಯ ಹಳಿಯಾಳ ತಾಲೂಕಿನಲ್ಲಿ ಅತಿಹೆಚ್ಚು ಪ್ರಕರಣ ದಾಖಲಾಗಿದ್ದವು. ಆದರೆ ಕೆಲದಿನಗಳಿಂದ ತಾಲೂಕಿನಲ್ಲಿ ಕೊರೋನಾ ಸಂಪೂರ್ಣ ನಿಯಂತ್ರಣದಲ್ಲಿದ್ದು ಕೇವಲ 3 ಪ್ರಕರಣ ದಾಖಲಾಗಿದೆ.

ಸದ್ಯ ಮೂರನೇ ಅಲೆಯ ಭಯ ಎದುರಾಗಿದ್ದು, ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಸಹ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಇದರ ನಡುವೆ ಜನರು ಸಹ ಕೆಲವೆಡೆ ಎಚ್ಚರ ತಪ್ಪಿ
ಓಡಾಡುತ್ತಿದ್ದು, ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳದಿರುವುದು ಇನ್ನಷ್ಟು ಸೋಂಕಿನ ಹೆಚ್ಚಳಕ್ಕೆ ಕಾರಣವಾಗಲಿದೆ ಎನ್ನಲಾಗಿದ್ದು ಈ ಬಗ್ಗೆ ಜಿಲ್ಲಾಡಳಿತ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದಿದ್ದರೇ ಇನ್ನು ಕೆಲ ದಿನದಲ್ಲಿಯೇ ಸೋಂಕಿನ ಪ್ರಮಾಣ ಇನ್ನೂ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ ಎನ್ನಲಾಗಿದೆ.

ಒಟ್ಟಿನಲ್ಲಿ ಕರೋನಾ ಕಣ್ಣಾಮುಚ್ಚಾಲೆಯಿಂದ ಜನತೆ ಕಂಗಾಲಾಗಿದ್ದು ಮುಂದೇನಾಗಬಹುದು ಎಂಬ ನಿರೀಕ್ಷೆಯಲ್ಲಿ ಜನತೆ ಭಯದಲ್ಲೇ ಕಾಲಕಳೆಯುವಂತಾಗಿದೆ.