ಕೋವಿಡ್ ಸೋಂಕು ನಿಯಂತ್ರಣದ ಹಿನ್ನಲೆ ರಾಜ್ಯಾದ್ಯಂತ ಕಟ್ಟು ನಿಟ್ಟಿನ ರಾತ್ರಿ ಕರ್ಫ್ಯೂ ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅಲ್ಲದೇ, ಕೊರೋನಾ ಸೋಂಕು ಹೆಚ್ಚಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಾಮರಾಜನಗರ, ಸೇರಿದಂತೆ ಇನ್ನಿತರ ಗಡಿ ಜಿಲ್ಲೆಗಳಲ್ಲಿ ವಿಕೇಂಡ್ ಕರ್ಫ್ಯೂ ಜಾರಿಗೆ ತರಲಾಗುವುದು. ಇಂದಿನಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ ಜಾರಿಗೆ ಬರಲಿದ್ದು, ರಾತ್ರಿ 9 ರಿಂದ ಬೆಳಗ್ಗೆ 5ರ ವರೆಗೆ ಯಾವುದೇ ರೀತಿಯ ಚಟುವಟಿಕೆಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಎಂಟು ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನಲೆ ನಿಯಂತ್ರಣ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿಗಳು ಮಹತ್ವದ ಸಭೆ ನಡೆಸಿದರು. ಮೂರನೇ ಅಲೆ ನಿಯಂತ್ರಣ ಸಂಬಂಧ ತೆಗೆದುಕೊಳ್ಳಬಹುದಾದ ಅಗತ್ಯ ಮುಂಜಾಗ್ರತಾ ಕ್ರಮದ ಕುರಿತು ಈ ವೇಳೆ ತಜ್ಞರೊಂದಿಗೆ ಚರ್ಚೆ ನಡೆಸಲಾಯಿತು.
ಶಾಲೆ ಆರಂಭದ ಕುರಿತು ಮಹತ್ವದ ನಿರ್ಧಾರ
ಇದೇ ವೇಳೆ ಶಾಲೆ ಆರಂಭದ ಕುರಿತು ಮಹತ್ವದ ನಿರ್ಧಾರವನ್ನು ಕೈಗೊಂಡಿರುವ ಸರ್ಕಾರ ಆಗಸ್ಟ್ 23ರಿಂದ ಶಾಲಾ- ಕಾಲೇಜು ಪ್ರಾರಂಭಿಸಲಾಗುವುದು ಎಂದು ಸ್ಪಷ್ಟಪಡಿಸಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮದೊಂದಿಗೆ ಎರಡು ಹಂತವಾಗಿ ಶಾಲಾ- ಕಾಲೇಜು ಆರಂಭ ಮಾಡಲಾಗುವುದು ಆಗಸ್ಟ್ 23 ರಿಂದ 9 ರಿಂದ ದ್ವಿತೀಯ ಪಿಯುಸಿ ತರಗತಿ ಪ್ರಾರಂಭ ಮಾಡಲಾಗುವುದು. ಬ್ಯಾಚ್ ವೈಸ್ ಮೂಲಕ ಶಾಲೆ ಆರಂಭ ಮಾಡಲಾಗುವುದು. ದಿನ ಬಿಟ್ಟು ದಿನದಂತೆ ವಾರದಲ್ಲಿ ಮೂರು ದಿನ ತರಗತಿ ನಡೆಸುವಂತೆ ಸೂಚನೆ ನೀಡಲಾಗಿದೆ. ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ಸಕಲ ಮುನ್ನೆಚ್ಚರಿಕೆವಹಿಸಿ ಶಾಲೆ ಆರಂಭ ಮಾಡಲಾಗುವುದು. ಇದಾದ ಬಳಿಕ ಪರಿಸ್ಥಿತಿ ಅವಲೋಕಿಸಿ, ಆಗಸ್ಟ್ ಕೊನೆ ವಾರದಿಂದ 1 ರಿಂದ 8ನೇ ತರಗತಿ ಪ್ರಾರಂಭಿಸುವ ಕುರಿತು ಚಿಂತನೆ ನಡೆಸಲಾಗಿದೆ ಎಂದರು.
ಕೊವೀಡ್ ಮೂರನೇ ಅಲೆಯ ತಜ್ಞರ ಸಮಿತಿ ಅಧ್ಯಕ್ಷರಾದ ದೇವಿಶೆಟ್ಟಿ, ಟಾಸ್ಕ್ ಫೋರ್ಸ್ ಸದಸ್ಯರಾದ ಡಾ ಮಂಜುನಾಥ್, ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್, ಡಿಜಿಪಿ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್ ಹಾಗೂ ಆರೋಗ್ಯ ಹಾಗೂ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು. ಸಚಿವರಾದ ಆರ್ ಅಶೋಕ್, ಕೆ ಸುಧಾಕರ್ ಕೂಡ ಈ ವೇಳೆ ಉಪಸ್ಥಿತರಿದ್ದರು.