ಕುಮಟಾ: ಕೂಲಿ ಕಾರ್ಮಿಕರಿಗೆ ಬಂದಂತಹ ಆಹಾರ ಕಿಟ್ ನಲ್ಲಿ ಸ್ಥಳೀಯ ಶಾಸಕರ ಹಸ್ತಕ್ಷೇಪದಿಂದ ಭಾರಿ ಅವ್ಯವಹಾರದ ಶಂಕೆಯನ್ನು ಕೂಲಿಕಾರ್ಮಿಕರು ವ್ಯಕ್ತಪಡಿಸಿದ್ದು, ಈ ಬಗ್ಗೆ ಸಮಗ್ರ ತನಿಖೆ ಮಾಡಬೇಕು ಎಂದು ತಾಲೂಕು ಜಾತ್ಯಾತೀತ ಜನತಾದಳದಿಂದ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ರವಾನಿಸಲಾಗಿದೆ.
ಕಳೆದ ತಿಂಗಳು, ಅಂದರೆ ಜುಲೈ 24ರಂದು ಹವ್ಯಕ ಕಲ್ಯಾಣ ಮಂಟಪದಲ್ಲಿ ಕೂಲಿಕಾರ್ಮಿಕರಿಗಾಗಿ ಆಹಾರ ಕಿಟ್ ವಿತರಣೆ ಉದ್ಘಾಟನೆ ಸಮಾರಂಭ ಶಾಸಕರ ನೇತೃತ್ವದಲ್ಲಿ ಕೇವಲ 5 ಕಾರ್ಮಿಕರಿಗೆ ಕೊಟ್ಟು ಆರಂಭಿಸಿದರು. ಅದಾದ ನಂತರ ಆ ಸಮಾರಂಭಕ್ಕೆ ಬಂದಿದ್ದ ಸಾವಿರಾರು ಅಧಿಕೃತ ಕೂಲಿಕಾರ್ಮಿಕರು ಆಕ್ರೋಶಗೊಂಡು ಪ್ರತಿಭಟಿಸಿ ತಮಗೆ ನ್ಯಾಯವಾಗಿ ಕೊಡಬೇಕು ಮತ್ತು ಕಳೆದ ವರ್ಷ, ಅಂದರೆ 2019- 20ನೇ ಸಾಲಿನಲ್ಲಿ ಬೆರಳಣಿಕೆಯಷ್ಟು ಕೂಲಿಕಾರ್ಮಿಕರಿಗೆ ಕೊಟ್ಟು ಉಳಿದವರಿಗೆ ಅನ್ಯಾಯ ಮಾಡಿದ್ದಾರೆ. ಆದ್ದರಿಂದ 2020- 21ನೇ ಸಾಲಿನಲ್ಲಿ ಕಾರ್ಮಿಕರ ಇಲಾಖೆಯವರೇ ಹಂಚಬೇಕೆಂದು ಆಗ್ರಹಿಸಿದ್ದರು.
ಆದರಂತೆ ಕಾರ್ಮಿಕ ಇಲಾಖೆ ಅಧಿಕಾರಿಗಳು ತಾಲೂಕಿನಲ್ಲಿ 14,000 ಅಧಿಕೃತ ಕಾರ್ಮಿಕರ ಕಾರ್ಡ್ ಹೊಂದಿದವರಿದ್ದು, 8000 ಆಹಾರ ಕಿಟ್ ತಾಲೂಕಿಗೆ ಬಂದಿದೆ. ಇದನ್ನು ನ್ಯಾಯಯುತವಾಗಿ ಹಂಚುವುದಾಗಿ ಭರವಸೆ ನೀಡಿದ್ದರು. ಅದರಂತೆ ವಿಳಂಬವಾದರೂ 3- 4 ದಿನ ಸುಮಾರು 2500ರಿಂದ 3000 ಕಿಟ್‌ಗಳನ್ನು ಇಲಾಖೆ ವತಿಯಿಂದ ಹಂಚಿದ್ದು ಕಂಡು ಬಂದಿದೆ. ಆದರೆ ಆ.7ರ ಬೆಳಿಗ್ಗೆ ಮೊದಲಿನಂತೆ ಕೂಲಿಕಾರ್ಮಿಕರು ಅಧಿಕೃತ ಕಾರ್ಡನ್ನು ಹಿಡಿದು ಇಲಾಖೆ ಮುಂದೆ ಬಂದು ನಿಂತಾಗ ಆಹಾರದ ಕಿಟ್ ಖಾಲಿಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆಗ ಕಾರ್ಮಿಕರು ಆಕ್ರೋಶಗೊಂಡು ವಿಚಾರಿಸಿದಾಗ ಕಾರ್ಮಿಕ ಇಲಾಖೆಯ ಅಧಿಕಾರಿಯಾದ ನವೀನ್ ಅವರು, ನಮ್ಮ ಇಲಾಖೆಯಿಂದ 8000 ಆಹಾರ ಕಿಟ್ ಬಂದಿದ್ದು, 3500 ಕಿಟ್ ಶಾಸಕ ದಿನಕರ ಶೆಟ್ಟಿಯವರು ತಾವೇ ಹಂಚುತ್ತೇವೆಂದು ಹೇಳಿ ತೆಗೆದುಕೊಂಡಿದ್ದಾರೆ. ಇನ್ನುಳಿದ 4500 ಆಹಾರದ ಕಿಟ್ ನಾನು ಕಾರ್ಮಿಕರಿಗೆ ಪ್ರಮಾಣಿಕವಾಗಿ ಟೋಕನ್ ಮೂಲಕ ಹಂಚಿಕೆ ಮಾಡಿದ್ದೇನೆ ಎಂದು ಗ್ರೇಡ್-II ತಹಶೀಲ್ದಾರ ಮತ್ತು ಪೊಲೀಸರ ಮುಂದೆ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಈ ಹೇಳಿಕೆ ಗಮನಿಸಿದಾಗ ಶಾಸಕರು 3500 ಆಹಾರ ಕಿಟ್ ತೆಗೆದುಕೊಂಡು ಹೋಗಿರುವುದು ಸಾಬೀತಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಶಾಸಕರು ತೆಗೆದುಕೊಂಡು ಹೋದ ಆಹಾರ ಕಿಟ್ ಅವರ ಮುಖಾಂತರವಾಗಿ ಅಧಿಕೃತ ಕಾರ್ಮಿಕರಿಗೆ ಬಂದಿಲ್ಲ ಎಂದು ಅಧಿಕೃತ ಕಾರ್ಮಿಕರು ಆರೋಪಿಸಿದ್ದಾರೆ. ಹೀಗಾಗಿ ಈ ವಿಷಯದಲ್ಲಿ ತನಿಖೆ ಮಾಡಿ ಕಾರ್ಮಿಕರ ಆಹಾರ ಕಿಟ್‌ನಲ್ಲಿ ಆಗುತ್ತಿರುವ ಅವ್ಯವಹಾರ ಅನ್ಯಾಯದ ಶಂಕೆಯನ್ನು ಕೂಲಂಕುಷವಾಗಿ ತನಿಖೆಗೊಳಪಡಿಸಬೇಕು. ಇಲಾಖೆಯಿಂದ ಬಂದ ಕಿಟ್ ಅನ್ನು ಸ್ಥಳೀಯ ಶಾಸಕರು ಹಸ್ತಕ್ಷೇಪ ಮಾಡಿ ತೆಗೆದುಕೊಂಡಿರುವುದನ್ನು ಜೆಡಿಎಸ್ ಖಂಡಿಸುತ್ತದೆ ಎಂದಿದ್ದಾರೆ.
ಈ ವೇಳೆ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ, ತಾಲೂಕು ಜೆಡಿಎಸ್ ಅಧ್ಯಕ್ಷರು, ಕಾರ್ಯಾಧ್ಯಕ್ಷ ಬಲೀಂದ್ರ ಗೌಡ, ಮುಖಂಡರಾದ ಜಿ.ಕೆ.ಪಟಗಾರ, ಮಂಜು ಜೈನ್ ಮುಂತಾದವರಿದ್ದರು.