ಕಾರವಾರ : ರಾಜ್ಯದ ಕೋವಿಡ್ ಪಾಸಿಟಿವ್ ವಿಚಾರದಲ್ಲಿ ರವಿವಾರ ದಕ್ಷಿಣ ಕನ್ನಡದಲ್ಲೇ ಅತೀ ಹೆಚ್ಚು ಪಾಸಿಟಿವ್ ಪ್ರಕರಣಗಳು ದಾಖಲಾಗಿದೆ ಹೀಗಾಗಿ ಉತ್ತರಕನ್ನಡಿಗರಿಗೂ ಇದರ ಬಿಸಿ ತಟ್ಟಬಹುದು ಎಂದು ಅಂದಾಜಿಸಲಾಗಿದೆ. ದಕ್ಷಿಣ ಕನ್ನಡ ಹಾಗೂ ಉತ್ತರಕನ್ನಡಗಳು ಅವಳಿ ಜಿಲ್ಲೆಗಳಂತಿರುವುದು ಕೊರೋನಾ ಹರಡಲು ಸಹಕಾರಿ ಆಗಬಹುದು ಎಂದು ಅಂದಾಜಿಸಲಾಗಿದ್ದು, ಉತ್ತರಕನ್ನಡಿಗರು ಎಚ್ಚರಿಕೆ ವಹಿಸಲೇ ಬೇಕಾದ ಅಗತ್ಯತೆಯನ್ನು ಈ ವರದಿ ಒತ್ತಿ ಹೇಳುತ್ತಿದೆ.
ರವಿವಾರದ ಲೆಕ್ಕಚಾರದಂತೆ, ಬೆಂಗಳೂರು ನಗರದಲ್ಲಿ 348 ಮಂದಿಯಲ್ಲಿ ಪಾಸಿಟಿವ್ ಕಾಣಿಸಿಕೊಂಡರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 438 ಮಂದಿಯಲ್ಲಿ ಪಾಸಿಟಿವ್ ದಾಖಲಾಗಿದೆ. ಉಳಿದ ಸ್ಥಾನದಲ್ಲಿ ಉಡುಪಿಯಲ್ಲಿ 129 ಪ್ರಕರಣಗಳು ಪತ್ತೆಯಾಗಿವೆ. ಬೆಂಗಳೂರು ನಗರದಲ್ಲಿ ಒಬ್ಬರು ಮೃತಪಟ್ಟರೆ, ದ.ಕ. ಜಿಲ್ಲೆಯಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಶೇ.1.25 ಪಾಸಿಟಿವಿಟಿ ದರವಿದ್ದರೆ, ಜಿಲ್ಲೆಯಲ್ಲಿ ಶೇ.4.57 ದಾಖಲಾಗಿದೆ.
438 ಮಂದಿಗೆ ಸೋಂಕು
ದ.ಕ. ಜಿಲ್ಲೆಯಲ್ಲಿ ರವಿವಾರ ಮತ್ತೆ ಕೋವಿಡ್ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು, 438 ಮಂದಿಗೆ ಸೋಂಕು ಕಂಡುಬಂದಿದೆ.
ಜಿಲ್ಲೆಯಲ್ಲಿನ ಒಟ್ಟು 1,03,184 ಸೋಂಕಿತರ ಪೈಕಿ 98,303 ಮಂದಿ ಕೊರೋನದಿಂದ ಮುಕ್ತರಾಗಿದ್ದಾರೆ. ಜಿಲ್ಲೆಯಲ್ಲಿ 1,466 ಕೋವಿಡ್ ಸಾವುಗಳು ವರದಿಯಾಗಿವೆ. ಜಿಲ್ಲೆಯ ವಿವಿಧ ಆಸ್ಪತ್ರೆಗಳು ಹಾಗೂ ಮನೆಗಳಲ್ಲಿ 3,415 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.