ಕುಮಟಾ : ತಾಲೂಕಿನ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ ಭಂಡಾರಕರ್ಸ್ ಸರಸ್ವತಿ ಪಿಯು ಕಾಲೇಜ್ ನ ಸಾಧಕ ವಿದ್ಯಾರ್ಥಿಗಳಿಗೆ ‘ವಿಧಾತ್ರಿ ಅವಾರ್ಡ್’ ಕಾರ್ಯಕ್ರಮ ಕೊರೋನಾ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಇತ್ತೀಚಿಗೆ ಯಶಸ್ವಿಯಾಗಿ ಸಂಪನ್ನವಾಯಿತು. ದ್ವಿತೀಯ ಪಿ.ಯು.ಸಿ ಯಲ್ಲಿ ಅರ್ಹ ಸಾಧನೆಗೈದ ವಿದ್ಯಾರ್ಥಿಗಳೆಲ್ಲರಿಗೆ ವಿಧಾತ್ರಿ ಅಕಾಡೆಮಿಯಿಂದ ‘ವಿಧಾತ್ರಿ ಅವಾರ್ಡ’ ನೀಡಿ ಸನ್ಮಾನಿಸಲಾಯಿತು.
ಸಂಸ್ಥೆಯ ಸಾಧನೆಯ ಬಗ್ಗೆ ವಿವರಿಸಿದ ವಿಧಾತ್ರಿ ಅಕಾಡಮಿಯ ಪ್ರಮುಖರಾದ ಗುರುರಾಜ ಶೆಟ್ಟಿ ಈ ವರ್ಷ 16 ವಿದ್ಯಾರ್ಥಿಗಳು 600 ಕ್ಕೆ 600 ಅಂಕಗಳಿಸಿ ಉತ್ತರಕನ್ನಡದಲ್ಲಿಯೇ ಹೊಸ ಸಂಚಲನ ಮೂಡಿಸಿರುವ ಅತ್ಯುತ್ತಮ ವಿದ್ಯಾರ್ಥಿಗಳ ಬಳಗವನ್ನು ಹೊಂದಿರುವ ಹಾಗೂ ವಿದ್ಯಾರ್ಥಿಗಳಿಗೆ ನಿರಂತರ ಮಾರ್ಗದರ್ಶನ ಮಾಡುತ್ತಿರುವ ವಿಧಾತ್ರಿ ಅಕಾಡೆಮಿ ಕುಮಟಾದ ಕೊಂಕಣ ಎಜ್ಯುಕೇಶನ್ ಜೊತೆಗೆ ಸೇರಿ ಅತ್ಯುತ್ತಮ ಶಿಕ್ಷಣವನ್ನು ನೀಡುತ್ತಿದೆ. ಬಿ.ಕೆ ಭಂಡಾರ್ಕರ್ಸ್ ಸರಸ್ವತಿ ಪಿ.ಯು ಕಾಲೇಜ್ ನಲ್ಲಿ ಅತ್ಯುತ್ತಮ ಶಿಕ್ಷಣ ನೀಡಲಾಗುತ್ತಿದ್ದು ಈ ವರ್ಷ 121 ವಿದ್ಯಾರ್ಥಿಗಳಲ್ಲಿ 16 ಮಂದಿ 600/600 ಅಂಕ ಪಡೆದರೆ, 38 ವಿದ್ಯಾರ್ಥಿಗಳು ಶೇ 95 ಕ್ಕೂ ಹೆಚ್ಚು ಅಂಕ ಪಡೆದಿದ್ದು, 29 ವಿದ್ಯಾರ್ಥಿಗಳು ಶೇ 90 ಕ್ಕೂ ಹೆಚ್ಚು ಅಂಕ ಗಳಿಸಿದ್ದಾರೆ. ಶೇ85 ಕ್ಕಿಂತ ಹೆಚ್ಚು ಅಂಕವನ್ನು 15 ವಿದ್ಯಾರ್ಥಿಗಳು ಪಡೆದಿದ್ದಾರೆ. 11 ವಿದ್ಯಾರ್ಥಿಗಳು 80 ಶೇ, 8 ವಿದ್ಯಾರ್ಥಿಗಳು 70 ಶೇ ಕ್ಕಿಂತ ಹೆಚ್ಚು ಅಂಕವನ್ನು ಹಾಗೂ 4 ಮಂದಿ ಶೇ 60 ಕ್ಕೂ ಮಿಗಿಲು ಅಂಕ ಪಡೆದಿದ್ದಾರೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂಸ್ಥೆಯ ಗೌರವಾನ್ವಿತ ಕಾರ್ಯದರ್ಶಿಗಳಾದ ಮುರಳಿಧರ ಪ್ರಭುರವರು ವಿದ್ಯಾರ್ಥಿ ಜೀವನದ ಮಹತ್ವದ ಕುರಿತು ಹಾಗೂ ಅವರು ಸಾಧಿಸಬಹುದಾದ ಗುರಿಗಳ ಕುರಿತು ಕಲ್ಪನೆಗಳನ್ನು ನೀಡುತ್ತಾ, ಮಕ್ಕಳು ಪಾಲಕರಿಗೆ ಸದಾ ಕಾಲ ನೆರಳಾಗಿ ಇರಬೇಕು, ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿಗಳಿಗೆ ಕೃತಜ್ಞರಾಗಿರಬೇಕು ಎಂದರು. ಕೊಂಕಣ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಗಾಗಿ ಸದಾ ಬಾಗಿಲನ್ನು ತೆರೆದಿರುತ್ತದೆ. ಇಲ್ಲಿ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿರುತ್ತದೆ. ಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುವುದರ ಮೂಲಕ ಹೊಸ ದಿಶೆಯಲ್ಲಿ ಸಂಸ್ಥೆಯನ್ನು ಕೊಂಡೊಯ್ಯುವ ಆಶಯ ವ್ಯಕ್ತಪಡಿಸಿದರು ಜೊತೆಗೆ ವಿಧಾತ್ರಿ ಅಕಾಡಮಿ ಶೈಕ್ಷಣಿಕವಾಗಿ ಉತ್ತಮ ಸಾಧನೆ ತೋರುತ್ತಿದ್ದು, ಕೊಂಕಣದ ಜೊತೆಗೆ ಒಡಂಬಡಿಕೆ ಮಾಡಿಕೊಂಡ ಬಗ್ಗೆ ಸಂತಸವಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
ಪ್ರಾಚಾರ್ಯ ಮಹೇಶ ಉಪ್ಪಿನ್ ಪ್ರಾಸ್ಥಾವಿಕವಾಗಿ ಮಾತನ್ನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳಾದ KCET, JEE (Mains), NEET, NATA, NDA, AGRI ಮುಂತಾದವುಗಳಿಗೆ ವಿಶೇಷ ಆದ್ಯತೆ ನೀಡುತ್ತಿರುವ ಈ ಸಂಸ್ಥೆ ದಕ್ಷಿಣ ಕನ್ನಡಗಳಲ್ಲಿ ಸಿಗುತ್ತಿರುವ ಶಿಕ್ಷಣಕ್ಕೆ ಸರಿ ಮಿಗಿಲೆನ್ನುವಂತೆ ಉತ್ತರ ಕನ್ನಡದಲ್ಲಿಯೇ ಶಿಕ್ಷಣ ನೀಡುತ್ತಿದೆ. ಈಗಾಗಲೇ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಮಕ್ಕಳು ಭಾಗವಹಿಸಿ ಸಾಧನೆ ಮಾಡುತ್ತಿರುವ ಹೆಗ್ಗಳಿಕೆಯೂ ವಿಧಾತ್ರಿಯದ್ದು ಎಂದರು.
ಈ ಸಂದರ್ಭದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ವಿಠಲ ನಾಯಕ ಅವರು ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿಶ್ವಸ್ಥರಾದ ರಮೇಶ ಪ್ರಭುರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ವಿಶ್ವಸ್ಥರಾದ ದಾಸ ಶಾನಭಾಗ ಉಪಸ್ಥಿತರಿದ್ದರು. ಸಿ.ವಿ.ಎಸ್.ಕೆ ಪ್ರೌಢಶಾಲೆಯ ಮುಖ್ಯಾಧ್ಯಾಪಕಿ ಶ್ರೀಮತಿ ಸುಮಾ ಪ್ರಭು, ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದರು.
ಉಪ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಹೆಗಡೆ ಉಪಸ್ಥಿತರಿದ್ದರು.ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಅನಿಸಿಕೆ ವ್ಯಕ್ತಪಡಿಸಿದರು. ಸರಸ್ವತಿ ಪಿಯು ಕಾಲೇಜಿನ ಉಪನ್ಯಾಸಕ ವರ್ಗದವರು ಪಾಲಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.