ಕಾರವಾರ: ಉತ್ತರಕನ್ನಡ ಜಿಲ್ಲೆ ಮತ್ತೆ ಇದೀಗ ಕೊರೋನಾ ಆತಂಕದ ನಡುವೆ ಸಿಲುಕುತ್ತಿದೆ ಎಂಬಂತೆ ಭಾಸವಾಗುತ್ತಿದೆ. ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಆತಂಕ ಪುನಃ ಪ್ರಾರಂಭವಾಗಿದ್ದು, ಕಳವಳಕಾರಿ ಜಿಲ್ಲೆಗಳ ಪಟ್ಟಿಗೆ ಉತ್ತರ ಕನ್ನಡ ಜಿಲ್ಲೆ ಸೇರ್ಪಡೆಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಉತ್ತರಕನ್ನಡ ಜಿಲ್ಲೆಯೂ ಸೇರಿದಂತೆ 5 ಜಿಲ್ಲೆಗಳನ್ನು ಕಳವಳಕಾರಿ ಜಿಲ್ಲೆಯೆಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಿದೆ. ಈ ಹಿಂದೆ ಅತಿ ಹೆಚ್ಚು ಪಾಸಿಟಿವಿಟಿ ಕಂಡುಬಂದ ಜಿಲ್ಲೆಗಳಲ್ಲಿ ದೇಶದ ಐದನೇ ಮತ್ತು ಕರ್ನಾಟಕದ ಎರಡನೇ ಜಿಲ್ಲೆಯಾಗಿ ಉತ್ತರ ಕನ್ನಡ ಜಿಲ್ಲೆಯನ್ನು ಗುರುತಿಸಲಾಗಿತ್ತು.
ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆ, ಕೊಡಗು, ಉತ್ತರ ಕನ್ನಡ, ಚಾಮರಾಜನಗರ ಹಾಗೂ ಉಡುಪಿ ಜೆಲ್ಲೆಗಳಲ್ಲಿ ಕೋವಿಡ್ ಹೆಚ್ಚಾಗಿರುವ ಕಾರಣ ಈ ಜೆಲ್ಲೆಗಳನ್ನು ಕಳವಳಕಾರಿ ಜಿಲ್ಲೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುತಿಸಿದೆ.
ಇದೀಗ ಪುನಃ ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಜಾಸ್ತಿಯಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಕಣ್ಣಿಗೆ ಬಿದ್ದು ಉತ್ತರ ಕನ್ನಡ ಜಿಲ್ಲೆಯು ಕಳವಳಕಾರಿ ಜಿಲ್ಲೆಯ ಪಟ್ಟಿಗೆ ಸೇರ್ಪಡೆಗೊಂಡಿದೆ. ರಾಜ್ಯದ 5 ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣ ಹೆಚ್ಚಾಗಿದ್ದು, ಇದು ಕಳೆದ 2 ವಾರಗಳಲ್ಲಿ ದೇಶದ ದೈನಂದಿನ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆಯಾಗಲು ಕಾರಣವಾಗಿದೆ.