ಕುಮಟಾ: ಪ್ರಸಕ್ತ ಸಾಲಿನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಆಂಗ್ಲ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ರಾಜ್ಯಕ್ಕೆ ದ್ವಿತೀಯ ಸ್ಥಾನದ ಜೊತೆಗೆ ಟಾಪ್ 10ರಲ್ಲಿ ಒಂಭತ್ತು ಸ್ಥಾನ ಪಡೆಯುವುದರೊಂದಿಗೆ ಅತ್ಯುತ್ತಮ ಸಾಧನೆಯನ್ನು ಪುನರಾವರ್ತಿಸಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಸತತವಾಗಿ ರಾಜ್ಯಮಟ್ಟದ ರ್ಯಾಂಕ್‍ಗಳನ್ನು ಗಳಿಸಿ, ಎಲ್ಲರ ಗಮನವನ್ನು ತನ್ನೆಡೆಗೆ ಸೆಳೆಯುತ್ತ ಬಂದಿದ್ದ ಸಿವಿಎಸ್‍ಕೆ ಪ್ರೌಢಶಾಲೆಯ ಎಸ್‍ಎಸ್‍ಎಲ್‍ಸಿ ಫಲಿತಾಂಶ ಈ ಬಾರಿಯೂ ಶೇ.100 ರಷ್ಟಾಗಿದ್ದು, ರಾಜ್ಯ ಮಟ್ಟದ ಟಾಪ್ 10 ರ್ಯಾಂಕ್‍ಗಳಲ್ಲಿ ಒಟ್ಟಾರೆ 9 ರ್ಯಾಂಕ್‍ಗಳನ್ನು ತನ್ನದಾಗಿಸಿಕೊಂಡಿದ್ದಲ್ಲದೇ, ರಾಜ್ಯ ಮಟ್ಟದ ದ್ವಿತೀಯ ಸ್ಥಾನವನ್ನು ಇಬ್ಬರು ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.
ಪರೀಕ್ಷೆಗೆ ಕುಳಿತ ಎಲ್ಲ ವಿದ್ಯಾರ್ಥಿಗಳೂ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಸಾಯಿಕಿರಣ ಶೇಟ್ ಹಾಗೂ ಪೂರ್ವಾ ನಾಯ್ಕ ತಲಾ 625 ಕ್ಕೆ 623 ಅಂಕಗಳಿಸಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದರೆ, ಪ್ರತಿಷ್ಠಾ ಬಿಲ್ಲವ 621 ಅಂಕದೊಂದಿಗೆ ರಾಜ್ಯಕ್ಕೆ ತೃತೀಯ ಸ್ಥಾನ, ಕೀರ್ತಿ ನಾಯ್ಕ 618 ಅಂಕಗಳಿಸಿ ರಾಜ್ಯಕ್ಕೆ ಐದನೇ ಸ್ಥಾನ, ಶ್ರೀನಂದಾ ದಿಂಡೆ 617 ಅಂಕದೊಂದಿಗೆ ರಾಜ್ಯಕ್ಕೆ ಆರನೇ ಸ್ಥಾನ, ವಿದ್ಯಾ ಪೈ ಮತ್ತು ರಂಜನಾ ಮಡಿವಾಳ ತಲಾ 615 ಅಂಕದೊಂದಿಗೆ ರಾಜ್ಯಕ್ಕೆ ಎಂಟನೇ ಸ್ಥಾನ ಹಾಗೂ ಶ್ರೇಯಾ ಮಾಶಲ್ಕರ ಮತ್ತು ಶುಭಾ ನಾಯ್ಕ ತಲಾ 614 ಅಂಕಗಳಿಸಿ ರಾಜ್ಯಕ್ಕೆ ಒಂಭತ್ತನೇ ಸ್ಥಾನ ಪಡೆದು ಅತ್ಯುತ್ತಮ ಸಾಧನೆಗೈದಿದ್ದಾರೆ.
ಪ್ರಥಮ ಭಾಷೆಯಲ್ಲಿ 5, ದ್ವಿತೀಯ ಭಾಷೆಯಲ್ಲಿ 27, ತೃತೀಯ ಭಾಷೆಯಲ್ಲಿ 32, ಗಣಿತದಲ್ಲಿ 10, ವಿಜ್ಞಾನದಲ್ಲಿ 9, ಹಾಗೂ ಸಮಾಜ ವಿಜ್ಞಾನದಲ್ಲಿ 12 ಮಂದಿ ವಿದ್ಯಾರ್ಥಿಗಳು ಪೂಣಾರ್ಂಕ ಪಡೆದು ಸಾಧನೆ ಮೆರೆದಿದ್ದಾರೆ. ಒಟ್ಟೂ 51 ವಿದ್ಯಾರ್ಥಿಗಳು ಒಂದು ಅಥವಾ ಹೆಚ್ಚು ವಿಷಯಗಳಲ್ಲಿ ಪೂಣಾರ್ಂಕ ಗಳಿಸಿದ್ದಾರೆ. ಪರೀಕ್ಷೆಗೆ ಕುಳಿತ 143 ವಿದ್ಯಾರ್ಥಿಗಳ ಪೈಕಿ 106 ಮಂದಿ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾದರೆ, ಉಳಿದ 37 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಶೇ.99 ಮೇಲ್ಪಟ್ಟು 3 ವಿದ್ಯಾರ್ಥಿಗಳು, ಶೇ.98 ಮೇಲ್ಪಟ್ಟು 9 ವಿದ್ಯಾರ್ಥಿಗಳು, ಶೇ.95 ಮೇಲ್ಪಟ್ಟು 31, ಶೇ.90 ಮೇಲ್ಪಟ್ಟು 67, ಶೇ85 ಮೇಲ್ಪಟ್ಟು 91, ಶೇ.60 ಮೇಲ್ಪಟ್ಟು 143 ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿಗಳು, ಪಾಲಕರು ಹಾಗೂ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.