ನಿಯಂತ್ರಣತಪ್ಪಿ ಉರುಳಿದ ಕಾರು.
ಅಂಕೋಲಾ: ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ಉರುಳಿ ಬಿದ್ದಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿ 63ರ ಸುಂಕಸಾಳದಲ್ಲಿ ನಡೆದಿದೆ. ಹಾನಗಲ್‌ದಿಂದ ಗೋವಾಕ್ಕೆ ಹೊರಟಿದ್ದ ಸ್ವಿಫ್ಟ್ ಕಾರು ಮುಂದಿನಿಂದ ಬಂದ ಲಾರಿಯನ್ನು ತಪ್ಪಿಸಲು ಹೋಗಿ ರಸ್ತೆ ಪಕ್ಕದಲ್ಲಿ ಪಲ್ಟಿಯಾಗಿ ಕಾರು ತೀವ್ರ ಜಖಂಗೊಂಡಿದೆ. ಚಾಲಕ ಕಾಶಿಮ್ ಅದಷ್ಟವಶಾತ್ ಅಪಾಯದಿಂದ ಪಾರಾಗಿದ್ದಾನೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿ
ಕುಮಟಾ: ಕುಮಟಾದಿಂದ ಅಂಕೋಲಾ ಕಡೆ ಹೊರಟಿದ್ದ ಮಹೀಂದ್ರಾ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಹೆದ್ದಾರಿ ಪಕ್ಕದ ಡಿವೈಡರ್‍ಗೆ ಗುದ್ದಿ, ಪಲ್ಟಿಯಾದ ಘಟನೆ ಗುರುವಾರ ತಾಲೂಕಿನ ತಂಡ್ರಕುಳಿ ಸಮೀಪ ನಡೆದಿದೆ. ಘಟನೆಯಲ್ಲಿ ಚಾಲಕನಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಔಷಧಿ ಸಾಗಿಸುವ ವಾಹನ ಎಂದು ತಿಳುದುಬಂದಿದೆ. ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ನಡೆದಿದೆ. ಸ್ಥಳಕ್ಕೆ ಕುಮಟಾ ಪೋಲಿಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಆರತಿಬೈಲ್ನಲ್ಲಿ ಲಾರಿ ಪಲ್ಟಿ : ಚಾಲಕ-ನಿರ್ವಾಹಕ ಅಪಾಯದಿಂದ ಪಾರು
ಯಲ್ಲಾಪುರ: ತಾಲೂಕಿನ ರಾಷ್ಟೀಯ ಹೆದ್ದಾರಿ 63 ಮೇಲೆ ಆರತಿಬೈಲ್ ಘಟ್ಟದ ಅಪಾಯಕಾರಿ ತಿರುವಿನಲ್ಲಿ ಗುರುವಾರ ಲಾರಿಯೊಂದು ಪಲ್ಟಿಯಾಗಿದೆ. ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಸರಕು ತುಂಬಿದ ಲಾರಿ ಪಲ್ಟಿಯಾಗಿದ್ದು, ಚಾಲಕ- ನಿರ್ವಾಹಕರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.