ಸರಕಾರಿ ಶಾಲೆಗಳೆಂದರೆ ಮೂಗು ಮುರಿಯುತ್ತಿರುವ ಕಾಲಘಟ್ಟದಲ್ಲಿಯೂ ಮೂರು ದಶಕಗಳು ಮಿಕ್ಕಿದ ಬರ್ಗಿ ಪ್ರೌಢಶಾಲೆಯ ಹೆಜ್ಜೆಗುರುತುಗಳನ್ನು ಅವಲೋಕಿಸಿದರೆ ಗುಣಮಟ್ಟದ ಫಲಿತಾಂಶವನ್ನು ನೀಡುವಲ್ಲಿ ತಾನು ಯಾವುದೇ ಖಾಸಗಿ ಶಾಲೆಗಳಿಗೆ ಕಡಿಮೆಯಲ್ಲವೆಂಬುದನ್ನು ರುಜುವಾತು ಪಡಿಸುತ್ತಲೇ ಬಂದಿರುವುದು ಸ್ವಯಂವೇದ್ಯವಾಗದಿರದು. ಹಾಗೆ ನೋಡಿದರೆ ಅಕ್ಕಪಕ್ಕದ ಖಾಸಗಿ ಶಾಲೆಗಳಿಗಿಂತಲೂ ಪ್ರತಿವರ್ಷವೂ ಅತ್ಯುತ್ಕೃಷ್ಟವಾದ ಫಲಿತಾಂಶವನ್ನು ಕಾದುಕೊಂಡಿರುವುದು ಇದರ ಹಿರಿಮೆ.

ಮುಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿರುವ ಸಜ್ಜನಿಕೆಯ ಶ್ರೀಯುತ ನಾಗರಾಜ ನಾಯಕರಾದಿಯಾಗಿ ಮೇಲ್ನೋಟಕ್ಕೆ ತೀರಾ ಖಡಕ್ ಎನಿಸಿದರೂ ಮನುಷ್ಯತ್ವದ ಶ್ರೀಮಾನ್ ಚಂದ್ರಹಾಸ ರಾಯ್ಕರ್ ರವರಂತವರಲ್ಲದೇ, ಪ್ರಸ್ತುತದಲ್ಲಿ ಸಮಚಿತ್ತದ ಶ್ರೀಯುತ ಉಮೇಶ ನಾಯ್ಕರವರು ಶಾಲಾ ಮುಖ್ಯಸ್ಥರಾಗಿ ನೀಡಿದ ಸಮರ್ಥ ಮಾರ್ಗದರ್ಶನದಲ್ಲಿ ಪ್ರತಿಭಾ ಸಂಪನ್ನವಾದ ಬೋಧಕ ವೃಂದದ ಸಮರ್ಪಣಾ ಮನೋಭಾವದ ಸೇವೆಯಿಂದ ‘ಪ್ರಚಾರ – ಪ್ರದರ್ಶನ’ ಗಳ ಹಪಹಪಿಕೆಯಿಲ್ಲದೆ ಶಾಲೆಯು ಮುನ್ನಡೆದಿರುವುದು ಗಮನಾರ್ಹ. ಇಲ್ಲಿ ಕಾರ್ಯನಿರ್ವಹಿಸಿದ ಶ್ರೀಯುತರಾದ ಬಿ.ಎಸ್.ಗೌಡ, ರಾಜೇಂದ್ರ ಕೇಣಿ ಮೊದಲಾದವರು ವಿದ್ಯಾರ್ಥಿಗಳ ಅಂತರಾಳದಲ್ಲಿ ಪ್ರಾತಃಸ್ಮರಣೀಯರೆನಿಸಿದ್ದಾರೆ. ಇಲ್ಲಿನ ತಾರಕ್ಕೋರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿಯು ಪ್ರಾಪ್ತಿಸಿದಾಗ ಪ್ರಶಸ್ತ ವ್ಯಕ್ತಿತ್ವಕ್ಕೆ ಸಂದ ಗೌರವವೆಂದೇ ಊರಿಗೆ ಊರೇ ಹಿಗ್ಗಿದೆ.

ಬರ್ಗಿಯ ಪ್ರೌಢಶಾಲೆಯ ಸಾಧನೆಯ ಹಿನ್ನೋಟವನ್ನು ಇಣುಕಿದಾಗ ಮೊದಲ ಎಸ್.ಎಸ್.ಎಲ್.ಸಿ ತರಗತಿಯ ರಾಮಕೃಷ್ಣ ಹಳ್ಳೇರ ಎಂಬ ಬಡ ದಲಿತ ವಿದ್ಯಾರ್ಥಿಯು ಶಾಲೆಗೆ ಪ್ರಥಮನಾಗಿ, ಎಮ್.ಎಸ್ಸಿ, ಬಿ.ಇಡಿ ಓದಿ – ಇದೀಗ ಹೊನ್ನಾವರದ ಅಳ್ಳಂಕಿಯ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮೆಚ್ಚಿನ ಉಪನ್ಯಾಸಕ. ಹತ್ತಾರು ವರ್ಷಗಳ ಹಿಂದಷ್ಟೇ – ಪ್ರಿಯಾಂಕ ಎಂಬ ವಿದ್ಯಾರ್ಥಿನಿಯು ಎಸ್.ಎಸ್.ಎಲ್.ಸಿ ಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿದವರಲ್ಲಿ ಉತ್ತರಕನ್ನಡ ಜಿಲ್ಲೆಗೆ ಮೊದಲಿಗಳಾಗಿ ಇಲಾಖೆಯ ಗೌರವಕ್ಕೆ ಪಾತ್ರಳಾಗಿದ್ದಳು. ಮೂರು ವರ್ಷಗಳ ಹಿಂದೆ ದಿವ್ಯಾ ಪಟಗಾರ ಎಂಬಾಕೆ ಕುಮಟಾ ತಾಲೂಕಿನ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಲ್ಲಿ ತ್ರತೀಯಳಾಗಿ ಇಲಾಖೆಯ ಲ್ಯಾಪ್‌ಟಾಪ್ ಕೊಡುಗೆಗೆ ಭಾಜನಳಾದರೆ ಮರು ವರ್ಷವೇ ಆಕೆಯ ತಮ್ಮ ಸಂತೋಷನೊಂದಿಗೆ ನಾಗಶ್ರೀ ನಾಯಕ ಹಾಗೂ ಮಧುರಾ ಗಾವಡಿ ಎಂಬವರು ತಾಲೂಕಿನ ಸರಕಾರಿ ಪ್ರೌಢಶಾಲೆಗಳಲ್ಲಿ “ಟಾಪ್ ತ್ರೀ” ಎನಿಸಿ, ಮೂರು ಲ್ಯಾಪ್‌ಟಾಪ್ ಗಳನ್ನು ದಕ್ಕಿಸಿಕೊಂಡರೂ ಪತ್ರಿಕೆಗಳಲ್ಲಿ ಪ್ರತ್ಯೇಕವಾಗಿ ಸುದ್ದಿಯಾಗದೇ ಎಲೆ ಮರೆಯ ಕಾಯಿಯಂತೆ ಉಳಿದವರು.
ಇದೇ ಹಾದಿಯಲ್ಲಿ ಕ್ರಮಿಸಿದ – ಗಿರೀಶ ಸದಾನಂದ ಪಟಗಾರನಿಂದು – ಆರುನೂರಾ ಇಪ್ಪತ್ತೊಂದು ಅಂಕಗಳನ್ನು ಪಡೆದು ರಾಜ್ಯಕ್ಕೆ ನಾಲ್ಕನೆಯ ಸ್ಥಾನವನ್ನು ತನ್ನದಾಗಿಸಿಕೊಂಡು, ಕನ್ನಡ ಮಾಧ್ಯಮದಲ್ಲಿ ಕುಮಟಾ ತಾಲ್ಲೂಕಿಗೆ ಪ್ರಥಮನಾಗಿ ಬರ್ಗಿ ಪ್ರೌಢಶಾಲೆಯ ಘನತೆಯನ್ನೆತ್ತರಿಸಿದ್ದಾನೆ!

RELATED ARTICLES  ಜಿಲ್ಲೆಯಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಹೋರಾಟ : ಜಿಲ್ಲಾ ಸಮಿತಿ ರಚನೆಗೆ ನಿರ್ಧಾರ

ಆತನದು ಹೇಳಿಕೊಳ್ಳಲಾಗದ ಬವಣೆಯ ಬದುಕು. ಅವನ ಪಾಡು ಹತ್ತಿರದಿಂದ ಕಂಡವರಿಗಷ್ಟೇ ಗೊತ್ತು. ನವೋದಯಕ್ಕೆ ಹೋದವನು – ಮನೆಯ – ಅಮ್ಮನ ಸೆಳೆತದಿಂದ, ಅಲ್ಲಿ ಓದದೇ ಹಿಂದಿರುಗಿದ್ದ. ಮನೆಯಲ್ಲೂ ಓದಲಾಗದ ವಾತಾವರಣ ಅಜ್ಜಿಯ ಮನೆಗೋ – ಅತ್ತೆಯ ಮನೆಗೋ ಹೋಗಿ ಓದುತ್ತಿದ್ದರೂ ಮನೆಯಲ್ಲೆನಾಗುತ್ತಿದೆಯೋ ಎಂಬ ಆತಂಕದಲ್ಲಿಯೇ ಇದ್ದವನು ಅವನು. ಬಡತನವೊಂದೇ ಆತನ ಓದಿಗೆ ಅಡ್ಡಿಯಾಗಿದ್ದರೆ ಅದನ್ನಾತ ಮೆಟ್ಟಿ ನಿಲ್ಲುವಲ್ಲಿ ಅಷ್ಟೇನೂ ವಿಶೇಷವೆನಿಸುತ್ತಿರಲಿಲ್ಲ. ಆದರೆ ಅದರೊಂದಿಗಿನ ಅಡಚಣೆಯ – ಕೊರಗನ್ನೂ ಮೀರಿ ಮಾಡಿರುವ ಆತನ ಹಂತವಾರು ಸಾಧನೆಯು ಉಲ್ಲೇಖನೀಯ. ಎನ್.ಎಮ್.ಎಮ್.ಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಶಿಷ್ಯವೇತನದ ಸೌಲಭ್ಯಕ್ಕೆ ಅರ್ಹನಾಗಿ ಯಾವುದೇ ಗೈಡ್ – ನೋಟ್ಸ್ ಗಳಿಲ್ಲದೆ , ” ಬಡ ಎತ್ತಿಗೆ ಧರೆಯ ಮೇಲಿನ ಹುಲ್ಲೇ ಗತಿ” ಎಂಬಂತೆ ಶಿಕ್ಷಕರ ಬೋಧನೆ – ಮಾರ್ಗದರ್ಶನವನ್ನೇ ಮಹಾಪ್ರಸಾದವೆಂದುಕೊಂಡ ಆತ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಹಾಗೂ ಗಣಿತ ವಿಷಯದಲ್ಲಿ ಒಂದೊಂದು ಪ್ರಶ್ನೆಗಳಿಗೆ ತಪ್ಪಾಗಿ ಉತ್ತರಿಸಿ, ನಾಲ್ಕು ಅಂಕಗಳನ್ನು ಕಳೆದುಕೊಂಡು ಆರುನೂರಾ ಇಪ್ಪತ್ತೊಂದು ಅಂಕಗಳನ್ನು ಪಡೆದರೂ ಆರುನೂರಾ ಇಪ್ಪತ್ತೈದಕ್ಕೆ ಆರುನೂರಾ ಇಪ್ಪತ್ತೈದು ಅಂಕಗಳನ್ನು ಪಡೆಯದಿರುವ ಬಗ್ಗೆ ಆತನಿಗೆ ಕಲಿಸಿದವರಿಗೆ ಅಚ್ಚರಿಯಿದೆ!

ಅವನ ಬಗ್ಗೆ ಅಷ್ಟರಮಟ್ಟಿಗೆ ಭರವಸೆಯಿಡಲು ಕಾರಣಗಳಿಲ್ಲದ್ದಿಲ್ಲ. ಮೂರು ವರ್ಷಗಳ ಹಿಂದಿನ ಬರ್ಗಿ ಪ್ರೌಢಶಾಲೆಯ ಎಂಟನೇಯ ತರಗತಿಯ ಕೋಣೆಯಲ್ಲಿದ್ದೀತ ನಯ, ವಿನಯ, ಗಾಂಭೀರ್ಯದೊಂದಿಗಿನ ಕಲಿಕೆಯಲ್ಲಿನ ಒಲವಿಂದ ಇತರೆಲ್ಲ ವಿದ್ಯಾರ್ಥಿಗಳಿಗಿಂತ ಪ್ರತ್ಯೇಕನೆನಿಸಿ ಗಮನವನ್ನು ಸೆಳೆದಿದ್ದ. ಅವನಲ್ಲಿ ಕೊಂಚವೂ ಹುಡುಗಾಟಿಕೆಯ ಬುದ್ದಿಯಿರಲಿಲ್ಲ ಅವನ ಮುಖದಲ್ಲಿ ಕೊರತೆಯೆದ್ದು ತೋರುತ್ತದ್ದರೂ ಆತ ತನ್ನ ಪಾಡನ್ನು ಯಾರಲ್ಲಿಯೂ ಹೇಳಿಕೊಳ್ಳದೇ ತನ್ನ ನೋವನ್ನು ತನ್ನೊಳಗೆಯೇ ನುಂಗಿಕೊಂಡಿದ್ದ ಏನನ್ನಾದರೂ ಸಾಧನೆ ಮಾಡಲೇಬೇಕೆಂಬ ಉತ್ಕಟವಾದ ಇಚ್ಛೆಯಂತೂ ಅವನೊಳಗಿತ್ತು. ಮನೆಯ ಪ್ರಕ್ಷುಬ್ಧ ವಾತಾವರಣದಲ್ಲಿ ಓದಲು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿ ನಿರ್ಮಾಣವಾದ ಹಂತದಲ್ಲಿ ಶಾಲೆ ಬಿಡಬೇಕಾದ ಅನಿವಾರ್ಯತೆಯೆದುರಾದರೂ ಶಿಕ್ಷಕರ ನೈತಿಕ ಬೆಂಬಲದಿಂದ ಸ್ಥೈರ್ಯವನ್ನು ಕಳೆದುಕೊಳ್ಳದೇ ಗಟ್ಟಿಗನಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದ ಪರಿಣಾಮವಾಗಿ ಇಂದೀಗ ಅವನು ಶಾಲೆಯಿಂದಾಚೆ ತಾಲೂಕು – ಜಿಲ್ಲೆಯನ್ನು ಮೀರಿ ನಾಡಿಗೆ ನಾಡೆ ತನ್ನತ್ತ ನೋಡುವಂತವನಾದ್ದಾನೆ.

RELATED ARTICLES  ಮಾನಸಿಕ ಹಿಂಸೆ ತಾಳಲಾರದೆ ಮಹಿಳೆ ಆತ್ಮಹತ್ಯೆ?

ಖಾಸಗಿ ಕಾಲೇಜಿನವರು ಈತನನ್ನು ತಮ್ಮ ಕಾಲೇಜಿಗೆ ದಾಖಲಿಸಿಕೊಳ್ಳಲು ದುಂಬಾಲು ಬಿದ್ದರೂ, “ಒಲ್ಲೆ” ಎಂದು ಸನಿಹದ ಹೀರೇಗುತ್ತಿಯ ಸರಕಾರಿ ಕಾಲೇಜಿನಲ್ಲಿಯ ಪದವಿಪೂರ್ವ ತರಗತಿಯ ವಿಜ್ಞಾನ ವಿಭಾಗಕ್ಕೆ ದಾಖಲಾದ ಈತ, ಸರಕಾರಿ ವ್ಯವಸ್ಥೆಯ ಸಾಬಲ್ಯವನ್ನು ಮನಗಂಡವನು. ಮುಂದೇ ಇಂಜಿನಿಯರಿಂಗ್ ಓದಿ, ಐ.ಎ.ಎಸ್ ಅಧಿಕಾರಿಯಾಗಬೇಕೆಂಬ ಹಂಬಲವು ಅವನದು. *ಎಷ್ಟು ಎತ್ತರಕ್ಕೆ ಏರಿದರೂ ಸಹಜತೆಯನ್ನು ಕಳೆದುಕೊಳ್ಳದ ಮುಗ್ದತೆಯೆಂದೂ ಅವನಿಂದ ದೂರವಾಗದು*. ಚಾರಿತ್ರಿಕ ಸಾಧನೆಯಿಂದ ಶಾಲೆಗೆ ಗರಿಮೂಡಿಸಿದ ಗಿರಿಯನ್ನು ಆತನ ಹೆತ್ತವರ ಎದುರಿನಲ್ಲಿ ಮನೆಯಂಗಳದಲ್ಲಿ ಸಂಮಾನಿಸಿದ ಅಮೃತ ಕ್ಷಣಗಳಿಗೆ ಸಾಕ್ಷಿಯಾಗಿರುವುದಕ್ಕೆ ಧನ್ಯತೆಯಿದೆ!

ಉತ್ತರ ಕನ್ನಡ ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಮಾನ್ಯ ಉಪನಿರ್ದೇಶಕರಾದ ಶ್ರೀಮಾನ್ ಹರೀಶ ಗಾಂವಕರ್, ಕುಮಟಾದ ಡಯಟ್ ನ ಮಾನ್ಯ ಪ್ರಾಚಾರ್ಯರಾದ ಶ್ರೀಯುತ ಈಶ್ವರ್ ನಾಯ್ಕ ಹಾಗೂ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ರಾಜೇಂದ್ರ ಭಟ್ಟರವರು ಗಿರೀಶನಂತಹ ಅದ್ಬುತ ಪ್ರತಿಭೆಯನ್ನು ಅನಾವರಣಗೊಳಿಸಿದ ಗ್ರಾಮೀಣ ಭಾಗದ ಬರ್ಗಿ ಪ್ರೌಢಶಾಲೆಯ ಕುರಿತು ಎದೆದುಂಬಿ ಪ್ರಶಂಸಿಸಿದ್ದಾರೆ.

– *ಮಂಜುನಾಥ ಗಾಂವಕರ್, ಬರ್ಗಿ*
ದೂ.ಸಂ – ೯೯೦೧೯೧೫೬೭೨ / ೯೯೧೬೧೩೨೯೭೮