ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಅಂಗಸಂಸ್ಥೆಗಳಿಂದ 75ರ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಟ್ರಸ್ಟ್‌ನ ಅಧ್ಯಕ್ಷರಾದ ವಿಠ್ಠಲ ನಾಯಕ ನೆರವೇರಿಸಿದರು. ಸಂಸ್ಥೆಯ ಕಾರ್ಯದರ್ಶಿ ಮುರಲಿಧರ ಪ್ರಭು ಮಾತನಾಡಿ, ನನಗಿಂತ ದೇಶ ಮುಖ್ಯ ಅನ್ನುವುದು ಪ್ರತಿಯೊಬ್ಬರ ನಿಲುವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು, ಹಾಕಿ ಮಾಂತ್ರಿಕ ಧ್ಯಾನಚಂದ ಅವರ ದೇಶಭಕ್ತಿಯ ಉಕ್ತಿಯನ್ನು ಮನೋಜ್ಞವಾಗಿ ಸ್ಪಷ್ಟಪಡಿಸಿದರು. 75ರ ಸಂಭ್ರಮದ ನೆನಪಿಗೆ 75 ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರಗಳನ್ನು ಅನಾವರಣಗೊಳಿಸಿ ಭಾರತಮಾತೆಯ ನಕಾಶೆಯ ಸುತ್ತ 75 ಹಣತೆಯನ್ನು ಬೆಳಗಿಸಿದ್ದು ಕಾರ್ಯಕ್ರಮಕ್ಕೆ ಮೆರಗನ್ನು ತಂದಿತ್ತು. ಸಂಸ್ಥೆಯ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ಆನ್‌ಲೈನ್ ಮೂಲಕ ವೀಕ್ಷಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಸ್ಪರ್ಧೆಗಳನ್ನು ನಡೆಸಿ, ವಿಜೇತರಾದವರಿಗೆ ಬಹುಮಾನಗಳನ್ನು ಘೋಷಿಸಲಾಯಿತು. ಸಂಸ್ಥೆಯ ವಿಶ್ವಸ್ಥರಾದ ರಮೇಶ ಪ್ರಭು, ರಾಮನಾಥ ಕಿಣಿ, ನಿವೃತ್ತ ಪ್ರಾಚಾರ್ಯ ಎಂ.ಎಂ.ಹೆಗಡೆ, ಅಂಗ ಸಂಸ್ಥೆಗಳ ಮುಖ್ಯಸ್ಥರು, ಗುರುರಾಜ ಶೆಟ್ಟಿ, ಪ್ರಾಚಾರ್ಯ ಮಹೇಶ ಉಪ್ಪಿನ, ಶಿಕ್ಷಕರು, ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಪ್ರಕಾಶ ಗಾವಡಿ ನಿರೂಪಿಸಿ, ವಂದಿಸಿದರು. ಶಿಕ್ಷಕರಾದ ಶಿವಾನಂದ ಭಟ್ಟ ಹಾಗೂ ಲಕ್ಷ್ಮಿ ಹೆಗಡೆ ವಿವಿಧ ದೇಶಭಕ್ತಿಗೀತೆಗಳನ್ನು ಸಾದರಪಡಿಸಿದರು.