ಕುಮಟಾ ; ವಿದ್ಯಾರ್ಥಿಗಳ ಅನುಪಸ್ಥಿತಿಯಲ್ಲಿ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದು ಊಹಿಸಿಕೊಳ್ಳಲು ಅಸಾಧ್ಯವಾದರೂ ಅದು ಸಾಧ್ಯ ಎಂಬುದನ್ನು ಕೋವಿಡ್ ಕಾಯಿಲೆ ಸತ್ಯವಾಗಿಸಿದೆ. ಆದರೆ ಹೆಗಡೆಯ ಹೆಣ್ಣುಮಕ್ಕಳ ಶಾಲೆಯ ಶಿಕ್ಷಕ ವೃಂದ ಆಧುನಿಕ ತಂತ್ರಜ್ಞಾನವನ್ನು ಶಾಲೆಯಲ್ಲಿ ಬಳಸಿಕೊಂಡು ಆನ್ಲೈನ್ನಲ್ಲಿ ಲೈವ್ ಕಾರ್ಯಕ್ರಮ ಸಂಯೋಜಿಸಿ ವಿದ್ಯಾರ್ಥಿಗಳೆಲ್ಲರೂ ದೇಶಭಕ್ತಿ ಗೀತೆ ಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಮಾಡಿರುವುದು ಸರ್ಕಾರಿ ಶಾಲೆ ಯಾವುದಕ್ಕೂ ಕಡಿಮೆಯಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಅವರು ಹೆಣ್ಣು ಮಕ್ಕಳ ಶಾಲೆಯಲ್ಲಿ ಸಂಯೋಜಿಸಿದ ದೇಶಭಕ್ತಿ ಗೀತೆ ಮತ್ತು ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಆನ್ಲೈನ್ ಲೈವ್ ನಲ್ಲಿ ಉದ್ಘಾಟಿಸಿ ಶಿಕ್ಷಕರ ಪ್ರಯತ್ನಕ್ಕೆ ಅಭಿನಂದಿಸಿದರು
ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರೇಖಾ ನಾಯ್ಕ ಮಾತನಾಡಿ ಈ ಶಾಲೆಯಲ್ಲಿ ಈಗಾಗಲೇ ಒಂದರಿಂದ ಏಳನೇ ತರಗತಿ ಗಳಿಗೆ ಆನ್ಲೈನ್ನಲ್ಲಿ ಕಲಿಕೆ ಪ್ರಾರಂಭಗೊಂಡಿದ್ದು ಈಗ ರಾಷ್ಟ್ರೀಯ ಹಬ್ಬವನ್ನು ಸಹ ಆನ್ಲೈನ್ನಲ್ಲಿ ಲೈವ್ ಕಾರ್ಯಕ್ರಮ ಬಿತ್ತರಿಸಿರುವುದು ಶಾಲೆಗೆ ಊರಿಗೆ ಹಾಗೂ ನಮ್ಮ ತಾಲೂಕಿಗೆ ಹೆಮ್ಮೆ ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ ಇಂತಹ ಕಾರ್ಯಕ್ರಮಗಳು ಶಿಕ್ಷಕರಿಗೆ ಮಕ್ಕಳ ಬಗ್ಗೆ ಇರುವ ಕಾಳಜಿ ಯನ್ನು ವ್ಯಕ್ತಪಡಿಸುತ್ತದೆ ಎಂದು ಅಭಿಪ್ರಾಯಪಟ್ಟು ಶಿಕ್ಷಕರ ಪ್ರಯತ್ನಕ್ಕೆ ಅಭಿನಂದಿಸಿದರು.
ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ತಾಲೂಕು ಅಧ್ಯಕ್ಷರು ರವೀಂದ್ರ ಭಟ್ಟ ಸೂರಿ ಶಿಕ್ಷಕರ ಕ್ರಿಯಾಶೀಲತೆ ಮತ್ತು ವಾಸ್ತವಿಕತೆಯೊಂದಿಗೆ, ತೊಡಗಿಸಿಕೊಳ್ಳುವಿಕೆ ಯಿಂದ ಹೆಗಡೆಯ ಹೆಣ್ಣು ಮಕ್ಕಳ ಶಾಲೆಯಲ್ಲಿ ಕೊರೋನ ಸಂಕಷ್ಟ ಕಾಲದಲ್ಲೂ ಶಾಲೆಯ ಚಟುವಟಿಕೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸುವಂತೆ ಸಾಧ್ಯವಾಯಿತು ಎಂದರು.
ಪ್ರಾರಂಭದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ ಧ್ವಜಾರೋಹಣ ನಡೆಸಿ ಕಾರ್ಯಕ್ರಮಕ್ಕೆ ಶುಭ ಕೋರಿದರು. ನಿಕಟಪೂರ್ವ ಎಸ್ಡಿಎಂಸಿ ಅಧ್ಯಕ್ಷ ಲಕ್ಷ್ಮಣ ನಾಯ್ಕ ಶಿಕ್ಷಣಾಭಿಮಾನಿ ವಿನೋದ್ ವೆರ್ನೇಕರ್ ಉಪಸ್ಥಿತರಿದ್ದರು.
ಮುಖ್ಯಾಧ್ಯಾಪಕಿ ಮಂಗಲ ಹೆಬ್ಬಾರ್ ಪ್ರಾಸ್ಥಾವಿಕ ನುಡಿಯೊಂದಿಗೆ ನಮ್ಮ ಶಾಲೆಯಲ್ಲಿ ಇಂದು ನಮ್ಮ ಎದುರಿಗೆ ವಿದ್ಯಾರ್ಥಿಗಳೆಲ್ಲ ಭೌತಿಕವಾಗಿ ಇದ್ದಂತೆ ಭಾಸವಾಗುತ್ತಿದೆ. ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಗೀತೆಗಳು ಭಾಷಣ ಸ್ಪರ್ಧೆಯನ್ನು ಆನ್ಲೈನ ಲೈವ್ ನಲ್ಲಿ ಏರ್ಪಡಿಸಿರುವುದು ಗ್ರಾಮೀಣ ಪ್ರದೇಶದಲ್ಲಿದ್ದರೂ ನಮ್ಮ ಸರ್ಕಾರಿ ಶಾಲೆ ತಂತ್ರಜ್ಞಾನ ಅಳವಡಿಸಿಕೊಳ್ಳುವಲ್ಲಿ ಬಹಳಷ್ಟು ಮುಂದಿದೆ ಎಂಬುದನ್ನು ಸಾಕ್ಷೀಕರಿಸುತ್ತದೆ ಎಂದರು.
ಶಿಕ್ಷಕ ಶ್ರೀಧರ್ ಗೌಡ ತಾಂತ್ರಿಕ ನೆರವು ನೀಡಿದರು. ದೈಹಿಕ ಶಿಕ್ಷಕಿ ಶಾಮಲಾ ಪಟಗಾರ ನಿರ್ವಹಿಸಿದರು. ಶಿಕ್ಷಕರಾದ ನಾಗರಾಜ ಶೆಟ್ಟಿ ರೇಣುಕಾ ನಾಯ್ಕ, ನಯನ ಪಟಗಾರ ಸಹಕರಿಸಿದರು. ಅಂತೂ 62 ವಿದ್ಯಾರ್ಥಿನಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆ 85 ಪಾಲಕ-ಪೋಷಕರು ವಿದ್ಯಾರ್ಥಿನಿಯರು ಲೈವ್ ನಲ್ಲಿ ಕಾರ್ಯಕ್ರಮ ವೀಕ್ಷಿಸಿದರು.