ಮಂಗಳೂರು: ಬಿಜೆಪಿ ಯುವ ಮೋರ್ಚಾ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ಮತ್ತು ಮೆರವಣಿಗೆಗೆ ಅನುಮತಿ ನಿರಾಕರಿಸಿರುವ ದ.ಕ. ಜಿಲ್ಲಾಡಳಿತವು ಮಂಗಳೂರು ನಗರ ಸಹಿತ ಜಿಲ್ಲಾದ್ಯಂತ ಪ್ರತಿಬಂಧಕಾಜ್ಞೆಯನ್ನು ವಿಧಿಸಿದೆ. ನೆಹರೂ ಮೈದಾನದಲ್ಲಿ ಸಮಾವೇಶ ನಡೆಸುವುದಕ್ಕೆ ಮಾತ್ರ ನಗರ ಪೊಲೀಸ್ ಆಯುಕ್ತರು ಬಿಜೆಪಿಯವರಿಗೆ ಷರತ್ತುಬದ್ಧ ಅನುಮತಿ ನೀಡಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ಪೊಲೀಸರ ಆದೇಶವನ್ನು ಲೆಕ್ಕಿಸದೆಯೇ ಬಿಜೆಪಿ ನಾಯಕರು ಬೈಕ್ ರ್ಯಾಲಿಯನ್ನು ನಡೆಸಿಯೇ ಸಿದ್ಧ ಎಂದು ಹೇಳಿದ್ದಾರೆ.
ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ. 6ರ (ಬುಧವಾರ) ಬೆಳಗ್ಗೆ 6 ಗಂಟೆಯಿಂದ ಸೆ. 8ರ ಬೆಳಗ್ಗೆ 6 ಗಂಟೆಯ ತನಕ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ 35 (3) ರನ್ವಯ ಪ್ರತಿಬಂಧಕಾಜ್ಞೆಯನ್ನು ವಿಧಿಸಲಾಗಿದ್ದು, ಈ ಅವಧಿಯಲ್ಲಿ ಬೈಕ್ ರ್ಯಾಲಿ ನಡೆಸುವುದನ್ನು ಅಥವಾ ರ್ಯಾಲಿ ಮೂಲಕ ದ.ಕ. ಜಿಲ್ಲೆಗೆ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ| ಕೆ.ಜಿ. ಜಗದೀಶ್ ಅವರು ತಿಳಿಸಿದ್ದಾರೆ.
ನಗರದ ಜ್ಯೋತಿ ವೃತ್ತದಿಂದ ಡಿಸಿ ಕಚೇರಿ ತನಕ ಬೈಕ್ ರ್ಯಾಲಿ ಮತ್ತು ಮೆರವಣಿಗೆ ನಡೆಸಲು ಅನುಮತಿ ನೀಡುವಂತೆ ಸಂಘಟಕರು ಬಂದು ಮನವಿ ಮಾಡಿದ್ದು, ಕಾನೂನು ಸುವ್ಯವಸ್ಥೆ ಪಾಲನೆಯ ದೃಷ್ಟಿಯಿಂದ ಅದಕ್ಕೆ ಅನುಮತಿ ನೀಡಲಾಗಿಲ್ಲ. ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲೂ ಪ್ರತಿಬಂಧಕಾಜ್ಞೆ ವಿಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ತಿಳಿಸಿದ್ದಾರೆ.
ಸಮಾವೇಶಕ್ಕೆ ಮಾತ್ರ ಅನುಮತಿ
ನೆಹರೂ ಮೈದಾನದಲ್ಲಿ ಸಮಾವೇಶ ನಡೆಸಲು ಷರತ್ತುಬದ್ಧ ಅನುಮತಿ ನೀಡ ಲಾಗಿದೆ. ಸಮಾವೇಶವನ್ನು ಪೂರ್ವಾಹ್ನ 11ರಿಂದ ಮಧ್ಯಾಹ್ನ 2 ಗಂಟೆ ತನಕ ನಡೆಸ ಬಹುದು ಎಂದು ಆಯುಕ್ತರು ತಿಳಿಸಿದ್ದಾರೆ. ಸಮಾವೇಶದಲ್ಲಿ ಯಾವುದೇ ಊರಿನವರು ಭಾಗವಹಿಸಬಹುದು. ಇದಕ್ಕೆ ನಿರ್ಬಂಧವಿಲ್ಲ ಎಂದು ವಿವರಿಸಿದರು.
ರ್ಯಾಲಿ ನಡೆಸಿದರೆ ಸಭೆ ನಡೆಯುವುದೇ?
ಸಭೆ ನಡೆಸಲು ಬಿಜೆಪಿಗೆ ಈಗಾಗಲೇ ಅನು ಮತಿ ಸಿಕ್ಕಿದೆ. ಆದರೆ ಬುಧವಾರ ಸಂಜೆಯ ವರೆಗೂ ನೆಹರೂ ಮೈದಾನದಲ್ಲಿ ಸಭೆ ಆಯೋ ಜಿಸುವುದಕ್ಕೆ ಬೇಕಾದ ಯಾವುದೇ ಪೂರ್ವ ಸಿದ್ಧತೆಗಳು ನಡೆದಿರುವುದು ಕಂಡು ಬಂದಿಲ್ಲ. ಜ್ಯೋತಿ ವೃತ್ತದಿಂದ ರ್ಯಾಲಿಯಲ್ಲಿ ಹೋಗಿ ಸಭೆ ನಡೆಸುವುದು ಬಿಜೆಪಿ ನಾಯಕರ ಲೆಕ್ಕಾಚಾರ . ರ್ಯಾಲಿಗೆ ಅನುಮತಿ ನಿರಾಕರಿಸಿರುವ ಕಾರಣ ಯಾವ ರೀತಿ ಬೈಕ್ ರ್ಯಾಲಿ ನಡೆಸುತ್ತಾರೆ ಹಾಗೂ ನೆಹರೂ ಮೈದಾನ ದವರೆಗೆ ಮೆರವಣಿಗೆ ನಡೆಸುತ್ತಾರೆ ಎಂಬುದು ಸದ್ಯಕ್ಕೆ ಕುತೂಹಲದ ಸಂಗತಿ. ಸ್ವತಃ ಬಿಜೆಪಿ ನಾಯಕರು ಕೂಡ ಈ ಬಗೆಗಿನ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ. ಈ ನಡುವೆ ಬಿಜೆಪಿ ಕಡೆ ಯಿಂದ ಎಲ್ಲ ಕಾರ್ಯಕರ್ತರಿಗೂ “ಗುರುವಾರದ ಮಂಗಳೂರು ಚಲೋದಲ್ಲಿ ಭಾಗ ವಹಿಸುವುದಕ್ಕೆ ಬೆಳಗ್ಗೆ 10 ಗಂಟೆಗೆ ಮಂಗಳೂರಿಗೆ ಬನ್ನಿ’ ಎನ್ನುವ ಸಂದೇಶ ರವಾನೆಯಾಗುತ್ತಿದೆ. ಒಂದೊಮ್ಮೆ ರ್ಯಾಲಿ ನಡೆಸಿದರೆ ಬಂಧಿಸಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೀಗಿರು ವಾಗ ಸಭೆಗೂ ಮೊದಲೆ ರ್ಯಾಲಿ ನಡೆಸಿ ಬಂಧನ ಕ್ಕೊಳಗಾದರೆ ಸಭೆ ನಡೆಯುವುದೇ ಅಥವಾ ಇಲ್ಲವೇ ಎನ್ನುವುದು ಕೂಡ ಗುರುವಾರ ಬೆಳಗ್ಗೆಯಷ್ಟೇ ಗೊತ್ತಾಗಲಿದೆ.
ಪೊಲೀಸ್ ಬಂದೋಬಸ್ತು
ರ್ಯಾಲಿ ಹಿನ್ನೆಲೆ ಬಂದೋಬಸ್ತು ವ್ಯವಸ್ಥೆಗಾಗಿ 5 ಜನ ಎಎಸ್‌ಪಿ, 15 ಪೊಲೀಸ್ ಇನ್ಸ್ ಪೆಕ್ಟರ್, 50 ಮಂದಿ ಸಬ್ ಇನ್ಸ್‌ಪೆಕ್ಟರ್‌ಗಳು, 15 ಕೆ.ಎಸ್.ಆರ್.ಪಿ. ಪ್ಲಟೂನ್ (ಒಟ್ಟು 25 ಮಂದಿ ಇರುತ್ತಾರೆ) ಮತ್ತು ದ.ಕ. ಜಿಲ್ಲೆಯ ಹಾಗೂ ಹೊರಗಿನ 4 ಜಿಲ್ಲೆಗಳ ಸುಮಾರು 1,000 ಪೊಲೀಸರನ್ನು ನಿಯೋಜಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಅರೆ ಸೇನಾ ಪಡೆಯ ಸಿಬಂದಿ ಒಳಗೊಂಡ ಒಂದು ಕ್ಷಿಪ್ರ ಕಾರ್ಯಾಚರಣೆ ಪಡೆ, 8 ಮಂದಿ ಎಸ್‌ಪಿ ದರ್ಜೆಯ ಅಧಿಕಾರಿ ಗಳು, 12 ಜನ ಡಿವೈಎಸ್‌ಪಿ, 30 ಮಂದಿ ಇನ್ಸ್‌ಪೆಕ್ಟರ್‌ಗಳು, 60 ಮಂದಿ ಎಸ್ಸೆ„ಗಳು, 15 ಕೆ.ಎಸ್.ಆರ್.ಪಿ. ಪ್ಲಟೂನ್, 600 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.
ಮದ್ಯಂಗಡಿ ಬಂದ್
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೆ. 7ರಂದು ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯ ಎಲ್ಲ ವೈನ್ ಶಾಪ್ ಮತ್ತು ಮದ್ಯ ಮಾರಾಟದ ಅಂಗಡಿಗಳನ್ನು ಬೆಳಗ್ಗೆ 6ರಿಂದ ಸಂಜೆ 6 ಗಂಟೆಯ ವರೆಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.
ನಗರಕ್ಕೆ ಬಿಜೆಪಿ ನಾಯಕರ ದಂಡು
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿ ಯೂರಪ್ಪ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರಹ್ಲಾದ ಜೋಶಿ, ಮಾಜಿ ಮುಖ್ಯ ಮಂತ್ರಿ ಜಗದೀಶ್ ಶೆಟ್ಟರ್ ಸೇರಿ ದಂತೆ ಹಲವು ಪ್ರಮುಖ ಮುಖಂಡರು ಬುಧವಾರ ಸಂಜೆಯೇ ಮಂಗಳೂರಿಗೆ ಆಗಮಿಸಿದ್ದಾರೆ. ಇನ್ನು ಮಾಜಿ ಸಚಿವ ಆರ್. ಅಶೋಕ್ ಸೇರಿದಂತೆ ಉಳಿದ ಕೆಲವು ಬಿಜೆಪಿ ನಾಯಕರು ಮಂಗಳೂರಿಗೆ ಗುರುವಾರ ಬೆಳಗ್ಗೆ ಆಗಮಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಪೊಲೀಸ್ ಪಥ ಸಂಚಲನ
ಪೊಲೀಸರು ಬುಧವಾರ ಮಂಗಳೂರು ನಗರದಲ್ಲಿ ಪಥ ಸಂಚಲನ ನಡೆಸಿದರು. ಪಥ ಸಂಚಲನವು ಹಂಪನಕಟ್ಟೆ ವೃತ್ತ- ಲೈಟ್‌ಹೌಸ್ ಹಿಲ್ ರಸ್ತೆ, ಜ್ಯೋತಿ- ಬಲ್ಮಠ, ಕಂಕನಾಡಿ, ಫಳ್ನೀರ್ ಮಾರ್ಗವಾಗಿ ವಾಪಸ್ ನೆಹರೂ ಮೈದಾನದಲ್ಲಿ ಕೊನೆಗೊಂಡಿತು. ಚಂದ್ರಶೇಖರ್‌ಗೆ ಭದ್ರತೆ ಉಸ್ತುವಾರಿಭದ್ರತಾ ವ್ಯವಸ್ಥೆಯ ಉಸ್ತುವಾರಿಯನ್ನು ಮಂಗಳೂರಿನ ಹಿಂದಿನ ಆಯುಕ್ತ ಎಂ. ಚಂದ್ರಶೇಖರ ಅವರಿಗೆ ವಹಿಸಲಾಗಿದೆ