ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಎಲ್ಲ ತಾಲೂಕಿನ ಆಂಬುಲೆನ್ಸ್‌ಗಳಿಗೆ ಶಾಸಕರ ನಿಧಿಯಿಂದ, ತಾತ್ಕಾಲಿಕವಾಗಿಯಾದರೂ ಚಾಲಕರನ್ನು ನೇಮಿಸುವಂತೆ, ಜಿಲ್ಲಾ ಪಂಚಾಯತ ಸಿ.ಇ.ಒ ಎಂ. ಎಂ.ಪ್ರಿಯಾಂಗಾ ಅವರು ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಮಂಗಳವಾರ ಹಮ್ಮಿಕೊಳ್ಳಲಾದ, ಕೋವಿಡ್ 19 ಮತ್ತು ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದ (ನ್ಯೂಮೊಕೋಲ್ ಕಾಂಜಿನೇಟ್) ಜಿಲ್ಲಾಮಟ್ಟದ ಲಸಿಕಾ ಕಾರ್ಯಪಡೆಯ ಸಭೆ ನಡೆಸಿ ಅವರು ಮಾತನಾಡಿದರು.
‘ಕೋವಿಡ್ 19ನ ಸಂಭವನೀಯ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಗಂಭೀರ ಪರಿಣಾಮ ಆಗಬಹುದೆಂದು ತಜ್ಞರ ಅಭಿಪ್ರಾಯವಿದೆ. ಆದ್ದರಿಂದ ಜಿಲ್ಲೆಯಲ್ಲಿರುವ ಮಕ್ಕಳ, ಗರ್ಭಿಣಿಯರ ಹಾಗೂ ಬಾಣಂತಿಯರ ಆರೋಗ್ಯದ ಕುರಿತಾಗಿ ವಿಶೇಷ ಗಮನ ವಹಿಸಬೇಕು.
‘ಲಸಿಕಾ ಕಾರ್ಯಕ್ರಮದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಎಲ್ಲ ತಾಲ್ಲೂಕುಗಳಲ್ಲಿ ನಡೆಯುವ ಲಸಿಕಾ ಅಭಿಯಾನದ ವಿಡಿಯೊ ಸಾಕ್ಷ್ಯಚಿತ್ರ ಸಿದ್ಧಪಡಿಸಬೇಕು’ ಎಂದು ನಿರ್ದೇಶನ ನೀಡಿದರು.
‘ಆರೋಗ್ಯ ಇಲಾಖೆಯು ವಿವಿಧ ಇಲಾಖೆಗಳ ಸಮನ್ವಯದೊಂದಿಗೆ ಗ್ರಾಮಗಳು ಮತ್ತು ವಾರ್ಡ್‌ವಾರು ಆರೋಗ್ಯ ಸೇವೆಗಳ ಶಿಬಿರ ನಡೆಸಬೇಕು. ವಲಸೆ ಪ್ರದೇಶಗಳು, ಅಲೆಮಾರಿ ನಿವಾಸಿಗಳಿರುವ ಸ್ಥಳಗಳಿಗೆ ಆರೋಗ್ಯ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಭೇಟಿ ನೀಡಬೇಕು. ಅವರ ವ್ಯಾಪ್ತಿಯಲ್ಲಿರುವ ಫಲಾನುಭವಿಗಳ ಪಟ್ಟಿ ನೀಡಬೇಕು. ಶಿಬಿರದ ಸ್ಥಳ, ದಿನಾಂಕ ಹಾಗೂ ಸಮಯದ ಮಾಹಿತಿಯನ್ನು ನೀಡಿ ಶಿಬಿರವನ್ನು ಯಶಸ್ವಿಗೊಳಿಸಬೇಕು’ ಎಂದು ತಿಳಿಸಿದರು.