ಶಿರಸಿ: ತಾಲೂಕಿನ ಗೌಡಳ್ಳಿ ಸಮೀಪದ ಖಾನ್ ನಗರದ ಬಸ್ ತಂಗುದಾಣದಲ್ಲಿ ಕೈಚೀಲದಲ್ಲಿ ಅವಧಿಗೆ ಪೂರ್ವ ಜನಿಸಿದ ಮಗುವೊಂದು ಪತ್ತೆಯಾಗಿದ್ದು, ಆ ಸುದ್ದಿ ಇದೀಗ ಸದ್ದು ಮಾಡುತ್ತಿದೆ.
ಬಸ್ ನಲ್ಲಿ ತೆರಳಲು ಬಸ್ ನಿಲ್ದಾಣಕ್ಕೆ ಬಂದಿದ್ದ ಮಹಿಳೆಯೊಬ್ಬಳಿಗೆ ನಿಲ್ದಾಣದಲ್ಲಿ ಯಾರೋ ಬಿಟ್ಟು ಹೋಗಿದ್ದ ಚೀಲ ಸಿಕ್ಕಿದ್ದು, ಚೀಲದಲ್ಲಿ ನವಜಾತ ಗಂಡು ಮಗು ದೊರೆತಿದೆ. ಇದನ್ನು ನೋಡಿ ಮಹಿಳೆ ಕ್ಷಣಕಾಲ ಕಂಗಾಲಾಗಿದ್ದಾರೆ.
ಪ್ರತಿ ದಿನ ಬಸ್ ನಲ್ಲಿ ತನ್ನ ಕೂಲಿ ಕೆಲಸಕ್ಕಾಗಿ ತೆರಳುವ ಮಹಿಳೆಗೆ ತಂಗುದಾಣದಲ್ಲಿ ಚೀಲವೊಂದು ಕಾಣಿಸಿದೆ. ಈ ಚೀಲವನ್ನು ಯಾರೋ ಮರೆತು ಬಿಟ್ಟು ಹೋಗಿರಬೇಕು ಎಂದು ಮಹಿಳೆ ಆ ಚೀಲವನ್ನು ಮನೆಗೆ ತಂದು, ತೆರೆದಿದ್ದಾಳೆ. ಈ ವೇಳೆ ಅಳುವ ಸದ್ದು ಕೇಳಿದ್ದು, ಚೀಲ ತೆಗೆದು ನೋಡಿದಾಗ, ಮಗು ಇರುವುದು ಪತ್ತೆಯಾಗಿದೆ. ಮಾದೇವಿ ಎಂಬ ಮಹಿಳೆಗೆ ಈ ಮಗು ದೊರೆತಿದ್ದು ತಕ್ಷಣ ಆಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.
ಇದೀಗ ಮಗುವನ್ನು ಶಿರಸಿಯ ಸಹಾಯ ಟ್ರಸ್ಟ್ ಗೆ ಹಸ್ತಾಂತರಿಸಲಾಗಿದೆ. ಚೀಲದಲ್ಲಿ ಮಗುವನ್ನು ತುಂಬಿದ್ದರಿoದ ಮಗು ಅನಾರೋಗ್ಯ ಹದಗೆಟ್ಟಿದ್ದು, ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗಿದೆ. ಮಗು ಜನಸಿ ಮೂರ್ನಾಲ್ಕು ದಿನ ಆಗಿರುವ ಸಾಧ್ಯತೆಗಳಿದೆ ಎಂಬ ಮಾಹಿತಿ ದೊರೆತಿದೆ. ಅವಧಿಪೂರ್ವ ಜನಿಸಿದ ಶಿಶು ಇದಾಗಿದ್ದು 1.6 ಕೆಜಿ ತೂಕ ಇದೆ ಎನ್ನಲಾಗಿದೆ.
ಘಟನೆ ಸಂಬoಧ ಪ್ರಕರಣ ಸಹ ದಾಖಲಾಗಿದ್ದು, ಪೋಷಕರ ಪತ್ತೆಗೆ ಪ್ರಯತ್ನ ನಡೆಸಲಾಗುತ್ತಿದೆ. ಯಾರು ಬಿಟ್ಟು ಹೋಗಿದ್ದಾರೆ ಎಂಬುದರ ಕುರಿತು ಪೊಲೀಸರು ಮಾಹಿತಿ ಕಲೆಹಾಕುತ್ತಿದ್ದು, ಈಗಾಗಲೇ ತನಿಖೆ ಆರಂಭಿಸಿದ್ದಾರೆ.