ಹೊನ್ನಾವರ: ಪರ್ಶಿನ್ ಬೋಟ್ ಒಂದು ಕಾಸರಕೋಡ ಬಂದರು ಅಳಿವೆಯಲ್ಲಿ ಹೂಳಿನಲ್ಲಿ ಸಿಲುಕಿಕೊಂಡು ಆತಂಕ ಸೃಷ್ಠಿಸಿದ ಘಟನೆ ವರದಿಯಾಗಿದೆ. ಈ ಬೋಟ್ ಗಂಗೋಳ್ಳಿ ಮೂಲದ ಬೋಟ್ ಎಂದು ತಿಳಿದುಬಂದಿದೆ. ಬೋಟಿನಲ್ಲಿದ್ದ 25 ಜನರಲ್ಲಿ 23 ಜನರು ಈಜಿ ದಡ ಸೇರಿದರು. ಆದರೆ ಇಬ್ಬರು ಬೋಟನಲ್ಲಿ ಸಿಲುಕಿ ಕೊಂಡಿದ್ದರೆನ್ನಲಾಗಿದೆ.
ಮಧ್ಯಾಹ್ನ ಎರಡು ಗಂಟೆಯ ಸುಮಾರಿಗೆ ಸ್ಥಳೀಯ ಬೋಟ್ ಮಾಲಿಕ ಇಕ್ಬಾಲ್ ತಮ್ಮ ಎರಡು ಬೋಟ್ ಗಳ ಮೂಲಕ ಘಟನಾ ಸ್ಥಳಕ್ಕೆ ಒಂದು ಬೋಟನ್ನು ತಾವೆ ಖುದ್ದಾಗಿ ಚಲಾಯಿಸಿಕೊಂಡು , ಇನ್ನೊಂದು ಬೋಟನ್ನು ಚಾಲಕ ಶಂಕರ ಉಪ್ಪಾರ್ ಅವರ ಜೊತೆ ಕೆಲಸಗಾರರ ಜೊತೆ ತೆರಳಿ ಬೋಟ್ ಮತ್ತು ಇಬ್ಬರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಕರಾವಳಿ ಕಾವಲು ಪಡೆಯವರಿಗೆ ವಿಷಯ ತಿಳಿಸಿದರೂ ಯಾವುದೆ ಪ್ರಯೋಜನವಾಗಿಲ್ಲ ಎಂಬ ಆರೋಪ ಕೇಳಿಬಂದಿದೆ. ಬೆಳಿಗ್ಗೆ 11 ಘಂಟೆಯ ಸುಮಾರಿಗೆ ಘಟನೆ ನಡೆದಿದ್ದು ತಕ್ಷಣ ಕರಾವಳಿ ಕಾವಲು ಪಡೆಯವರಿಗೆ ವಿಷಯ ತಿಳಿಸಿದಾಗ , ಸಿಬ್ಬಂದಿ ಬಂದು ನಮ್ಮಲ್ಲಿ ಬೋಟ್ ಇಲ್ಲ ಎಂದು ಹೇಳಿ ಹೋಗಿದ್ದು ಬಿಟ್ಟರೆ ಯಾವುದೆ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.
ಇಲಾಖೆಯವರು ಯಾವುದೆ ಕ್ರಮ ಕೈಗೊಳ್ಳದೆ ಇರುವುದನ್ನು ಗಮನಿಸಿದ ಕಾಸರಕೋಡ ಬೋಟ್ ಮಾಲಕ ಎರಡು ಗಂಟೆಯ ಸುಮಾರಿಗೆ ತಮ್ಮ ಬೋಡ್ ಮತ್ತು ಕೆಲಸಗಾರರ ಜೊತೆ ಘಟನಾ ಸ್ಥಳಕ್ಕೆ ತೆರಳಿ ಬೋಟ್ ಮತ್ತು ಇಬ್ಬರು ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಇನ್ನು ಸ್ವಲ್ಪ ಸಮಯ ಆಗಿದ್ದರೆ ಬೋಟ್ ಮತ್ತು ಇಬ್ಬರು ಕೆಲಸಗಾರರನ್ನು ಕಳೆದು ಕೊಳ್ಳಬೇಕಾಗಿತ್ತು ಎಂದು ಹೇಳಲಾಗುತ್ತಿದೆ.