ಅನಧಿಕೃತ ವಸತಿಗೃಹಗಳ ಮಾಹಿತಿ ಕಲೆ ಹಾಕಿದ ಅಧಿಕಾರಿಗಳು.
ಗೋಕರ್ಣ: ಸೂಕ್ತ ಪರವಾನಿಗೆ ಪಡೆಯದೆ ಕಟ್ಟಡ ನಿರ್ಮಿಸಿ ಅನಧಿಕೃತ ವಸತಿಗೃಹಗಳನ್ನು ನಡೆಸಲಾಗುತ್ತಿದೆ ಮತ್ತು ತ್ಯಾಜ್ಯ ನೀರನ್ನು ಚರಂಡಿಗೆ ನೆರವಾಗಿ ಬಿಡಲಾಗುತ್ತಿದೆ. ಪ್ರಾಚ್ಯವಸ್ತು ಇಲಾಖೆಯ ಸಂರಕ್ಷಿತ ಪ್ರದೇಶದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲಾಗಿದೆ ಎಂಬ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಮಹಾಬಲೇಶ್ವರ ದೇವಾಲಯದ ಬಳಿ ಇರುವ ವಸತಿ ಗೃಹಗಳಿಗೆ ಕುಮಟಾ ತಹಶೀಲ್ದಾರ ವಿವೇಕ ಶೇಣ್ವಿ ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅದರಂತೆ ಇಲ್ಲಿನ ಗೃಹಕ್ಕೆ ತೆರಳಿ ಮಾಲೀಕರಿಂದ ಮಾಹಿತಿ ಪಡೆದರು.
ವಿದ್ಯಾರ್ಥಿ ಸಂಘದ ಉದ್ಘಾಟನೆ
ಕುಮಟಾ: ಇಲ್ಲಿನ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2020-21ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನೆ ಕುಮಟಾ ಕೆನರಾ ಕಾಲೇಜು ಸೊಸೈಟಿಯ ಕಾರ್ಯದರ್ಶಿ ಸುಧಾಕರ ನಾಯಕ ಇಂದು ನೆರವೇರಿಸಿದರು. ವಿಶ್ರಾಂತ ಪ್ರಾಚಾರ್ಯ ಮತ್ತು ಕೆನರಾ ಕಾಲೇಜು ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ಹಾಗೂ ಕಾರ್ಯಕ್ರಮದ ಅತಿಥಿ ಡಾ.ವಿವೇಕ ಪೈ ಮಾತನಾಡಿದರು. ಇನ್ನೋರ್ವ ಅತಿಥಿಗಳಾಗಿ ಹನುಮಂತ ಶಾನಭಾಗ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ 2018-19ನೇ ಸಾಲಿನಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ಸುಮಾ ನಾಯ್ಕ, ಆಶಾ ನಾಯ್ಕ ಮತ್ತು ಸೌಮ್ಯ
ಹೆಗಡೆಯವರನ್ನು ಸನ್ಮಾನಿಸಲಾಯಿತು. 34 ವರ್ಷಗಳ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಸಹಪಾಧ್ಯಾಪಕ ಡಾ.ಗಣಪತಿ ಶೇಟ್ ರವರನ್ನು ಸನ್ಮಾನಿಸಲಾಯಿತು.
ನಿವೃತ್ತ ಶಿರಸ್ತೇದಾರ ಜಿ. ಎನ್.ನಾಯ್ಕ ಇನ್ನಿಲ್ಲ.
ಅಂಕೋಲಾ: ತಾಲೂಕಿನ ಪುರಲಕ್ಕಿ ಬೇಣದ ನಿವಾಸಿಯಾಗಿದ್ದ ನಿವೃತ್ತ ಶಿರಸ್ತೇದಾರ ಜಿ. ಎನ್.ನಾಯ್ಕ ನಿಧನರಾದರು. ಕುಮಟಾ ಮೂಲದವರಾಗಿದ್ದಗಂಗಾಧರ ನಾಗಪ್ಪನಾಯ್ಕ ಪ್ರಥಮ ದರ್ಜೆ ಸಹಾಯಕರಾಗಿ ಜಿಲ್ಲೆಯ ಹೊನ್ನಾವರ, ಭಟ್ಕಳದಲ್ಲಿ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೂ ಸೇವೆ ಸಲ್ಲಿಸಿದ್ದರು. ಶಿರಸಿ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶಿರಸ್ತೇದಾರರಾಗಿ ನಿವೃತ್ತಿ ಹೊಂದಿದ್ದು, ಸುಮಾರು 30 ವರ್ಷಗಳ ಕಾಲ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಸರಳ ವ್ಯಕ್ತಿತ್ರದ ಮೂಲಕ ಗುರುತಿಸಿ ಕೊಂಡಿದ್ದರು. ಮೃತ ಜಿ. ಎನ್ ನಾಯ್ಕ, ಇಬ್ಬರು ಗಂಡು ಮಕ್ಕಳು, ಓರ್ವ ಮಗಳು, ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ.
ಡಾ.ಗುರುರಾಜ ಕರ್ಜಗಿಯವರಿಂದ ವಿಶೇಷ ಉಪನ್ಯಾಸ
ಹೊನ್ನಾವರ: ಶ್ರೀ ವಿಶ್ವವೀರಾಂಜನೇಯ ಮಹಾ ಸಂಸ್ಥಾನಂ, ಹೇಮಪುರ ಮಹಾಪೀಠ ಶ್ರೀಕ್ಷೇತ್ರ ಬಂಗಾರಮಕ್ಕಿಯ ಮಾರುತಿ ಗುರೂಜಿಯವರ ಚಾತುರ್ಮಾಸ್ಯವ್ರತದ ಪ್ರಯುಕ್ತ ಆ. 23 ರಂದು ಮಧ್ಯಾಹ್ನ 2:30ಕ್ಕೆ ಪ್ರಸ್ತುತ ಶೈಕ್ಷಣಿಕ ವ್ಯವಸ್ಥೆಗೆ ಪೂರಕವಾಗಿ ಸಂಸ್ಕಾರ ಮತ್ತು ಶಿಕ್ಷಣದೊಂದಿಗಿನ ಸಾಮರಸ್ಯದ ಸಂಸ್ಕಾರ-ಶಿಕ್ಷಣ ಎಂಬ ವಿಚಾರದ ಕುರಿತಾಗಿ ಖ್ಯಾತ ಶಿಕ್ಷಣ ತಜ್ಞರು ಹಾಗೂ ಸಾಂಸ್ಕೃತಿಕ ಚಿಂತಕರು ಆದ ಡಾ.ಗುರುರಾಜ ಕರ್ಜಗಿಯವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದ್ದು ಆಸಕ್ತರು ಪಾಲ್ಗೊಳ್ಳಬಹುದಾಗಿದೆ. ಕೋವಿಡ್ ನಿಯಮಪಾಲನೆ ಕಡ್ಡಾಯ ಎಂದು ತಿಳಿಸಲಾಗಿದೆ.