ಕುಮಟಾ- ಸಾಮಾಜಿಕ ಪರಿಶೋಧನೆಯಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿಗಳಾಗಿ ಮಹಿಳೆಯರಿಗೆ ಹೆಚ್ಚಿನ ಅವಕಾಶವನ್ನು ಸರ್ಕಾರ ನೀಡುತ್ತಿರುವುದು ಒಂದು ಆಶಾದಾಯಕ ಬೆಳವಣಿಗೆಯಾಗಿದ್ದು, ಸಾಮಾಜಿಕ ಪರಿಶೋಧನೆಯಿಂದ ಸರಕಾರಿ ಯೋಜನೆಗಳ ಅನುಷ್ಟಾನದಲ್ಲಿ ಸಾಕಷ್ಟು ಮಾರ್ಗದರ್ಶನ ದೊರೆಯುತ್ತಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಿ ಟಿ ನಾಯ್ಕ ನುಡಿದರು.
ಅವರು ಗ್ರಾಮೀಣ ಅಭಿವೃದ್ಧಿ ಇಲಾಖೆ, ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ ಬೆಂಗಳೂರು ಹಾಗೂ ಜಿಲ್ಲಾ ಮತ್ತು ತಾಲೂಕು ಪಂಚಾಯತಿಗಳ ಸಹಯೋಗದಲ್ಲಿ ಸೋಮವಾರ ಕುಮಟಾ ತಾಲೂಕು ಪಂಚಾಯತ್ ಸಭಾಭವನದಲ್ಲಿ ಮಹಿಳಾ ಗ್ರಾಮ ಸಂಪನ್ಮೂಲ ವ್ಯಕ್ತಿಗಳಿಗೆ ಆಯೋಜಿಸಲಾದ ಎರಡು ದಿನಗಳ ಸಾಮಾಜಿಕ ಪರಿಶೋಧನೆ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂಧರ್ಭದಲ್ಲಿ ಹಾಜರಿದ್ದ ಜಿಲ್ಲಾ ಸಾಮಾಜಿಕ ಪರಿಶೋಧನಾ ಸಮನ್ವಯಾಧಿಕಾರಿ ಜಿ.ಆಯ್. ಹೆಗಡೆ ಮಾತನಾಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗ್ರಾಮೀಣ ಭಾಗದಲ್ಲಿ ನಡೆಸುವ ಪ್ರತಿ ಯೋಜನೆಗಳನ್ನು ಇನ್ನು ಮುಂದೆ ಸಾಮಾಜಿಕ ಪರಿಶೋಧನೆ ಒಳಪಡಿಸುವ ಇಂಗಿತ ಹೊಂದಿದ್ದು, ಈ ದಿಸೆಯಲ್ಲಿ ಸಾಕಷ್ಟು ಸಿದ್ದತೆ ನಡೆಸುತ್ತಿರುವುದಾಗಿ ಹಾಗೂ ಸಾಮಾಜಿಕ ಪರಿಶೋದನೆ ಇನ್ನೂ ಹೆಚ್ಚಿನ ಫಲಿತಾಂಶ ಕ್ಕಾಗಿ ಸ್ಥಳೀಯ ಸ್ವಸಹಾಯ ಸಂಘದ ವಿದ್ಯಾವಂತ ಮಹಿಳೆಯರಿಗೆ ಅವಕಾಶ ನೀಡಿದ್ದಾಗಿಯೂ ತಿಳಿಸಿದರು.
ವೇದಿಕೆಯಲ್ಲಿದ್ದ ಭಟ್ಕಳ ತಾಲೂಕು ಸಾಮಾಜಿಕ ಪರಿಶೋಧನಾ ಸಮನ್ವಯಾಧಿಕಾರಿ ಉಮೇಶ ಮುಂಡಳ್ಳಿ ಇವರು ಮಾತನಾಡಿ ಮಹಿಳೆಯರು ಜಾಗೃತಗೊಂಡಲ್ಲಿ ಪೂರ್ಣ ಸಮಾಜವೇ ಜಾಗೃತಿಗೊಂಡತೆ, ಅಂತೆಯೇ ಈ ತರಬೇತಿ ಯಿಂದ ಸಾಮಾಜಿಕ ಪರಿಶೋಧನೆ ಬಗ್ಗೆ ತಿಳಿದುಕೊಳ್ಳುವುದರ ಜೊತೆಜೊತೆಗೆ ಗ್ರಾಮ ಮಟ್ಟದಲ್ಲಿ ಸರಕಾರದ ಹಲವು ಯೋಜನೆಗಳ ಬಗ್ಗೆ ಗ್ರಾಮೀಣ ಜನರಲ್ಲಿ ತಿಳಿವಳಿಕೆ ಮೂಡಿಸುವಲ್ಲಿಯೂ ಸಹಕಾರಿಯಾಗಬಲ್ಲರು ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಅಂಕೋಲಾ ತಾಲೂಕು ಸಾಮಾಜಿಕ ಪರಿಶೋಧನಾ ಸಮನ್ವಯಾಧಿಕಾರಿ ಗೀತಾ ಗಾಂವಕರ್ ಮಹಿಳೆಯರು ಕೇವಲ ಅಡಿಗೆ ಮನೆಗೆ ಸೀಮಿತವಾಗದೆ ಸಮಾಜದ ಹೊರಗು ಬಂದು ಕೆಲಸ ಮಾಡುವಂತಾಗಬೇಕು ಎಂದು ಕಿವಿಮಾತು ಹೇಳಿದರು. ತರಬೇತಿಯಲ್ಲಿ ಹಾಜರಿದ್ದ ಎಲ್ಲಾ ಶಿಬಿರಾರ್ಥಿಗಳಿಗೆ ಸಾಮಾಜಿಕ ಪರಿಶೋಧನಾ ತಾಲೂಕು ಘಟಕದಿಂದ ವಿಶೇಷವಾಗಿ ಮಾವಿನ ಗಿಡಗಳನ್ನು ನೀಡುವ ಮೂಲಕ ಪರಿಸರದ ಬಗ್ಗೆ ಕಾಳಜಿ ಮೂಡುವಂತೆ ಪ್ರೇರಣೆ ನೀಡಲಾಯಿತು.
ಸಭಾ ಕಾರ್ಯಕ್ರಮದ ನಂತರ ಇಡಿ ದಿನ ನರೇಗಾ,೧೫ನೇ ಹಣಕಾಸು ಯೋಜನೆ ಹಾಗೂ ಪ್ರಧಾನ ಮಂತ್ರಿ ಆವಾಸ್ ಯೋಜನೆಗಳ ಬಗ್ಗೆ ಸಂಪೂರ್ಣ ತರಬೇತಿ ಶಿಬಿರಾರ್ಥಿಗಳಿಗೆ ನೀಡಲಾಯಿತು.
ಕುಮಟಾ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಿ ಯಿಂದ ಆಯ್ಕೆಗೊಂಡ ಸುಮಾರು ೨೦ ಕ್ಕೂ ಹೆಚ್ಚಿನ ಗ್ರಾಮಸಂಪನ್ಮೂಲ ವ್ಯಕ್ತಿಗಳು ಹಾಜರಿದ್ದರು. ಪ್ರಾರಂಭದಲ್ಲಿ ಗ್ರಾಮ ಸಂಪನ್ಮೂಲ ವ್ಯಕ್ತಿ ಸೀಮಾ ನಾಯ್ಕ ಸ್ವಾಗತಿಸಿ,ರೇಖಾ ನಾಯ್ಕ ವಂದಿಸಿದರು.