ಹೊನ್ನಾವರ : ತಾಲೂಕಿನ ಹಳದೀಪುರ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿ ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಬೈಕ್ ಸವಾರರಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ಲಾರಿಯು ಹೊನ್ನಾವರ ಕಡೆಯಿಂದ ಕುಮಟಾ
ಮಾರ್ಗವಾಗಿ ಚಲಿಸುತ್ತಿರುವಾಗ ಈ ದುರ್ಘಟನೆ ನಡೆದಿದೆ. ಲಾರಿ ಬಡಿದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯಲ್ಲಿ ಬೈಕ್ ನಲ್ಲಿದ್ದ ಇಬ್ಬರು ಗಂಭೀರ ಗಾಯಾಳುವಾಗಿದ್ದಾರೆ. ಬೈಕ್ ನಲ್ಲಿದ್ದ ಪತಿ-ಪತ್ನಿ ತಾಲೂಕಿನ ಹಳದೀಪುರದ ಖಾಸಗಿ ಶಾಲಾ ಶಿಕ್ಷಕಿ ಆಶಾ ನಾಯ್ಕ ಹಾಗೂ ರಾಜು ನಾಯ್ಕ ಮಾವಿನಹೊಳೆ ಎಂದು ಗುರುತಿಸಲಾಗಿದೆ.
ಬೈಕ್ ತಿರುಗಿಸುವ ವೇಳೆ ಲಾರಿ ಬೈಕಿಗೆ ಬಡಿದ ಪರಿಣಾಮ ಬೈಕ್ ಓಡಿಸುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯವಾಗಿದ್ದು ಪತ್ನಿಯ
ಎಡೆಕಾಲಿನ ಮೇಲೆ ಲಾರಿಯ ಚಕ್ರ ಹತ್ತಿ ಹರಿದು ಕಾಲು ಮುರಿದಿದೆ ಎನ್ನಲಾಗಿದೆ.
ಅಪಘಾತ ಸಂಭವಿಸುತ್ತಿದ್ದಂತೆ ಸುತ್ತಮುತ್ತಲ ನೂರಾರು ಜನರು ಸೇರಿ ಅಪಘಾತಕ್ಕೆ ಒಳಗಾದವರನ್ನು ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸೇರಿಸುವ ಕೆಲಸ ಮಾಡಿದರು. ಈ ಕುರಿತಾಗಿ ಪ್ರಕರಣ ದಾಖಲಾಗಿದೆ.