ಕಾರವಾರ : ಪ್ರವಾಸಕ್ಕೆಂದು ಉತ್ತರಕನ್ನಡಕ್ಕೆ ಬರುವವರಿಗೆ ಇಲ್ಲಿಯ ಸಮುದ್ರ ವಿಶೇಷವಾಗಿ ಗೋಚರಿಸುತ್ತದೆ. ಆದರೆ ಎಷ್ಟೇ ಎಚ್ಚರವಹಿಸಿದರು ಪ್ರವಾಸಕ್ಕೆ ಬಂದವರು ಎಲ್ಲ ನಿಯಮಗಳನ್ನು ಮೀರಿ ನಡೆಯುತ್ತಿರುವುದು ಆತಂಕಕಾರಿ ವಿಚಾರವಾಗಿದೆ.
ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಪ್ರವಾಸಿಗನೋರ್ವ ಕಡಲಲ್ಲಿ ಈಜುತ್ತಿರುವಾಗ ಅಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತಿದ್ದವನನ್ನು ಲೈಫ್ ಗಾರ್ಡಗಳು ರಕ್ಷಿಸಿದ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಇಂದು ಸಂಜೆ ನಡೆದಿದೆ.
ಬೆಂಗಳೂರಿನ 24 ವರ್ಷ ವಯೋಮಾನದ ಶ್ರೇಯಸ್ ಅರಸ್ ರಕ್ಷಣೆಗೊಳಗಾದವನಾಗಿದ್ದು ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ನಾಲ್ಕು ಜನರೊಂದಿಗೆ ಪ್ರವಾಸಕ್ಕೆ ಇಂದು ಬಂದಿದ್ದರು ಎಂದು ವರದಿಯಾಗಿದೆ.
ಪ್ರವಾಸಕ್ಕೆ ಸ್ನೇಹಿತರೊಡನೆ ಬಂದ ಶ್ರೇಯಸ್ ಸಮುದ್ರದಲ್ಲಿ ಈಜುವಾಗ ಅಲೆಗೆ ಸಿಲುಕಿ ನಿತ್ರಾಣಗೊಂಡಿದ್ದ. ಇದನ್ನು ಗಮನಿಸಿದ ಲೈಫ್ ಗಾರ್ಡಗಳಾದ ನಾಗೇಂದ್ರ ಕುರ್ಲೆ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ರಗುವೀರ ನಾಯ್ಕರವರು ರಕ್ಷಣೆ ಮಾಡಿದ್ದಾರೆ.
ಕರೋನಾ ಲಾಕ್ಡೌನ್ ತೆರವಾದ ನಂತರದಲ್ಲಿ ಉತ್ತರಕನ್ನಡಕ್ಕೆ ಪ್ರವಾಸಕ್ಕೆ ಬರುವವರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ. ಗೋಕರ್ಣದಲ್ಲಿ ಸಮುದ್ರ ಪಾಲಾಗುವವರ ಸಂಖ್ಯೆ ಹಾಗೂ ಹಾಗೋ ಹೀಗೋ ಬದುಕಿ ಬಂದಿದ್ದಾರೆ ಎಂಬ ಸುದ್ದಿ ಸಾಮಾನ್ಯ ಎಂಬಂತಾಗಿದೆ.
ಪ್ರವಾಸಕ್ಕೆ ಬರುವವರು ಇಲ್ಲಿಯ ಸೌಂದರ್ಯವನ್ನು ಸವಿಯುವುದು ಸಹಜವಾದರೂ, ಮುನ್ನೆಚ್ಚರಿಕೆ ಇಲ್ಲದೆ ಈ ರೀತಿ ಮೋಜು ಮಸ್ತಿಗಳಲ್ಲಿ ತೊಡಗಿಕೊಳ್ಳುವುದು ಸ್ಥಳೀಯ ಆಡಳಿತ ಹಾಗೂ ಸಾರ್ವಜನಿಕರಿಗೂ ತಲೆನೋವಾಗಿ ಪರಿಣಮಿಸುತ್ತಿದೆ.