ಬೆಂಗಳೂರು : ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಆರಂಭದ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ, ವಿದ್ಯಾರ್ಥಿಗಳಿಗೆ ಕೋವಿಡ್ ನೆಗೇಟಿವ್ ವರದಿ ಕಡ್ಡಾಯವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್ ತಿಳಿಸಿದ್ದಾರೆ.ಸುದ್ದಿಗಾರರ ಜೊತೆ ಮಾತನಾಡಿದ ಅವರು ಸ್ಯಾನಿಟೈಸ್ ಮಾಡಿದ ನಂತರ ಮತ್ತೆ ತರಗತಿಗಳನ್ನು ಆರಂಭಿಸಲಾಗುವುದು, ಶಾಲೆ ಆರಂಭ ಮಾಡುವುದರಲ್ಲಿ ರಿಸ್ಕ್ ಇದೆ , ತಜ್ಞರ ಅಭಿಪ್ರಾಯದಂತೆ ಶಾಲೆಗಳನ್ನು ಆರಂಭ ಮಾಡಲಾಗುತ್ತದೆ ಎಂದರು.
ಕೊರೊನಾ ಮಕ್ಕಳ ಮೇಲೆ ಅಂತಹ ಪರಿಣಾಮ ಬೀರಲ್ಲ, ಒಂದರಿಂದ ಎಂಟನೇ ತರಗತಿಯನ್ನು ಕೂಡ ಶೀಘ್ರದಲ್ಲೇ ಆರಂಭಿಸಲಾಗುವುದು, ಈ ಬಗ್ಗೆ ಸಿಎಂ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು, ಕೊರೊನಾ ಪಾಸಿಟಿವ್ ದರ ಶೇ. 2 ಕ್ಕಿಂತ ಹೆಚ್ಚಾಗಿರುವ ಜಿಲ್ಲೆಗಳಲ್ಲಿ ಶಾಲೆಗಳನ್ನು ಆರಂಭ ಮಾಡುವುದಿಲ್ಲ ಎಂದು ಹೇಳಿದರು.
ಸೋಮವಾರದಿಂದ 9,10 ನೇ ತರಗತಿ ಹಾಗೂ ಪ್ರಥಮ ಮತ್ತು ದ್ವಿತೀಯ ಪಿಯುಸಿ ತರಗತಿ ಆರಂಭವಾಗಲಿದೆ, ರಾಜ್ಯದಲ್ಲಿ ಪ್ರಾಥಮಿಕ ಶಾಲೆಗಳ ಆರಂಭದ ಕುರಿತು ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಶಾಲೆ ಪ್ರಾರಂಭದ ಬಗ್ಗೆ ಮುಖ್ಯಮಂತ್ರಿ ಮಾತು
ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಂತ ಹಂತವಾಗಿ ಶಾಲೆಯನ್ನು ಪ್ರಾರಂಭವಾಗ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರದಿಂದ ಶಾಲೆ ಆರಂಭವಾಗಲಿದೆ. ಸರ್ಕಾರದಿಂದ ಎಲ್ಲಾ ಸಿದ್ದತೆ ಮಾಡಿಕೊಳ್ಳಲಾಗಿದೆ. ಶಾಲೆ ಆರಂಭದ ದಿನ ಬೆಂಗಳೂರಿನ ಕೆಲ ಶಾಲೆಗಳಿಗೆ ಭೇಟಿ ಕೊಡುತ್ತೇನೆ. ನನ್ನ ಜೊತೆ ಶಿಕ್ಷಣ ಸಚಿವರು ಕೂಡ ಶಾಲೆಗಳಿಗೆ ಭೇಟಿ ನೀಡುತ್ತಾರೆ ಎಂದರು.
ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಶಿಕ್ಷಕರಿಗೆ ವ್ಯಾಕ್ಸಿನೇಷನ್ ನೀಡಲಾಗಿದೆ. ಶಾಲೆಗಳನ್ನು ಸ್ಯಾನಿಟೈಜ್ ಮಾಡಲಾಗಿದೆ. ಯಾವುದೇ ಆತಂಕ ಇಲ್ಲದೆ ಮಕ್ಕಳು ಶಾಲೆಗೆ ಬರಬಹುದು. ಪೋಷಕರ ಸಮ್ಮತಿಯನ್ನು ಪಡೆದು ಮಕ್ಕಳು ಶಾಲೆಗೆ ಬರತಕ್ಕದು. ಪೋಷಕರು ಕೂಡ ಎಲ್ಲರೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದರು.