ಭಟ್ಕಳ: ಫೇಸ್‌ಬುಕ್‌ನಲ್ಲಿ ಸುನೀಲ ಅಣ್ಣನ ಅಭಿಮಾನಿ ಎನ್ನುವ ನಕಲಿ ಖಾತೆಯಲ್ಲಿ ಶಾಸಕ ಸುನೀಲ ನಾಯ್ಕರವರ ಮಾನಹರಣವನ್ನು ಮಾಡುತ್ತಿದ್ದು, ಆ ಖಾತೆಯನ್ನು ತಡೆಹಿಡಿದು ಅದರಲ್ಲಿ ಬರೆಯುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಶಾಸಕ ಆಪ್ತ ಸಹಾಯಕ ರಾಘವೇಂದ್ರ ಶಿರಾಲಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ.
ಸುನೀಲ್ ಅಣ್ಣನ ಅಭಿಮಾನಿ ಎಂಬ ಪೇಸ್ಬುಕ್ ಗ್ರೂಪನಲ್ಲಿ ಹೆಸರಿನಲ್ಲಿ ಶಾಸಕ ಸುನೀಲ್ ನಾಯ್ಕರ ಚಾರಿತ್ರ‍್ಯಹರಣ ಮಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಬೇರೆ ಬೇರೆ ಸಮುದಾಯ ಜನರು ಶಾಂತಿ ಸೌಹಾರ್ದತೆಯಿಂದ ಬಾಳುತ್ತಿದ್ದು,ಕೆಲವರು ನಕಲಿ ಫೇಸ್‌ಬುಕ್ ಖಾತೆಯನ್ನು ಸೃಷ್ಟಿಸಿಕೊಂಡು ಸಮುದಾಯಗಳ ಮಧ್ಯೆ ಸಾಮರಸ್ಯವನ್ನು ಕದಡುವ ಪ್ರಯತ್ನ
ಮಾಡುತ್ತಿದ್ದಾರೆ.
ಇದರಿಂದ ಶಾಸಕರ ತೇಜೋವಧೆ ನಡೆಸುವ ಮೂಲಕ ಸಮುದಾಯಗಳ ಮಧ್ಯೆ ಸೌಹಾರ್ದತೆಯನ್ನು ಕದಡುವ
ಪ್ರಯತ್ನ ನಡೆಸಲಾಗುತ್ತದೆ. ಇದರಿಂದ ಸಾರ್ವಜನಿಕ ಕಾರ್ಯಕ್ರಮಗಳಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಆದ್ದರಿಂದ ನಕಲಿ ಖಾತೆ ಸೃಷ್ಟಿಸಿ ಅವಹೇಳನವಾಗಿ ಬರೆಯುತ್ತಿರುವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇದಕ್ಕೆ ಸುನೀಲ್ ನಾಯ್ಕ ಪ್ರತಿಕ್ರಿಯೆ ಏನು?
ಯತಿವರ್ಯರಿಗೆ ವಿಶೇಷವಾದ ಸ್ಥಾನ ಮಾನ ನಮ್ಮ ಹಿಂದೂ ಧರ್ಮದಲ್ಲಿದೆ. ನನ್ನ ವಿರುದ್ಧದ ಅಪಪ್ರಚಾರವನ್ನು ಸಹಿಸುತ್ತಿದ್ದನೋ ಏನೋ ಆದರೆ ಗೋ ಸ್ವರ್ಗವನ್ನೇ ನಿರ್ಮಿಸಿ ಹಿಂದೂ ಸಮಾಜಕ್ಕೆ ಅತಿದೊಡ್ಡ ಕೊಡುಗೆಯನ್ನು ನೀಡಿದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿಯವರ ಹೆಸರನ್ನು ಮತ್ತು ಚಿತ್ರವನ್ನು ಬಳಸಿಕೊಂಡು ನನ್ನ ಅಭಿಮಾನಿ ಎಂಬ ಹೆಸರಿನಲ್ಲಿ ನಕಲಿ ಖಾತೆ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಅತಿ ಕೀಳುಮಟ್ಟದ ಅಪಪ್ರಚಾರದಲ್ಲಿ ವಿರೋಧಿಗಳು ತೊಡಗಿರುವುದು ಸಹಿಲಾರದ ಅಫರಾದವಾಗಿದೆ.
ಇಂದು ನಾನು ಈ ಸ್ಥಾನದಲ್ಲಿರಲು ಸರ್ವ ಸಮಾಜದ ಒಮ್ಮತದ ಪರಿಶ್ರಮ ಕಾರಣವಾಗಿದೆ. ನನ್ನ ಮತ ಕ್ಷೇತ್ರದ ಜನತೆ ನನ್ನ ಕೈ ಹಿಡಿದು ಶಾಸಕನನ್ನಾಗಿ ಆಯ್ಕೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಜಾತಿ ಹೆಸರಿನಲ್ಲಿ ಸಮಾಜದ ಸ್ವಾಸ್ಥ್ಯ ಹಾಳು ಮಾಡಲು ಪ್ರಯತ್ನಿಸುತ್ತಿರುವ ಇಂತಹ ನಕಲಿ ಖಾತೆಯ ಮೇಲೆ ಪ್ರಕರಣವನ್ನು ದಾಖಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.