ಅಂಕೋಲಾ : ನಾಡಿನ ಪ್ರತಿಷ್ಠಿತ ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಎನಿಸಿದ ಇಲ್ಲಿನ ಶ್ರೀರಾಮ್ ಸ್ಟಡಿ ಸರ್ಕಲ್ ತನ್ನ ದಶಮಾನೋತ್ಸವದ ಸ್ಮೃತಿಯಾಗಿ ಗಾಂಧಿ ಶತಮಾನೋತ್ತರ ಸುವರ್ಣ ಮಹೋತ್ಸವ ವರ್ಷದಿಂದ ಸಾಧಕರಿಗೆ ನೀಡುತ್ತಿರುವ “ಬಾಪು ಸದ್ಭಾವನಾ ಪುರಸ್ಕಾರ” ಕ್ಕೆ ಕಾರವಾರದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ॥ ಗಜಾನನ ನಾಯಕ ಹಾಗೂ ಬೈಂದೂರು- ಶಿರೂರಿನ ಜ್ಞಾನದ ಶಿಕ್ಷಣ ಸಂಸ್ಥೆಯ ಜಿ. ಎಸ್. ಭಟ್ ರವರು ಆಯ್ಕೆಯಾಗಿರುತ್ತಾರೆ.

ಶ್ರೀರಾಮ್ ಸ್ಟಡಿ ಸರ್ಕಲಿನ ಅಧ್ಯಕ್ಷ- ವಿಶ್ರಾಂತ ಕೃಷಿ ಅಧಿಕಾರಿ ಅರವಿಂದ ನಾಯಕ , ಕನ್ನಡ ಚಂದ್ರಮದ ಅಧ್ಯಕ್ಷ ಜಗದೀಶ ನಾಯಕ್ ಹಾಗೂ ನವ ಕರ್ನಾಟಕ ಸಂಘದ ಅಧ್ಯಕ್ಷರಾದ ಅಧ್ಯಾಪಕ ಮಂಜುನಾಥ ಗಾಂವಕರ ಬರ್ಗಿಯವರನ್ನೊಗೊಂಡ ತ್ರಿಸದಸ್ಯ ಸಮಿತಿಯು ಈ ಆಯ್ಕೆಯನ್ನು ಮಾಡಿದ್ದು, ಗಾಂಧಿ ಮಾಸದಲ್ಲಿ ಪುರಸ್ಕಾರ ಪ್ರದಾನ ಮಾಡಲಾಗುವುದೆಂದು ಸ್ಟಡಿ ಸರ್ಕಲ್ ನ ನಿರ್ದೇಶಕ ಸೂರಜ್ ಅರವಿಂದ್ ತಿಳಿಸಿದ್ದಾರೆ.

RELATED ARTICLES  ಮುಖಾಮುಖಿ ಡಿಕ್ಕಿಯಾದ ಲಾರಿಗಳು

೨೦೧೯ರಲ್ಲಿ ಅಂದಿನ ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿ ಅಬ್ದುಲ್ ಗಫಾರ್ ಮುಲ್ಲಾ ಹಾಗೂ ಹಿರಿಯ ರಾಷ್ಟ್ರೀಯವಾದಿ- ಚುಟುಕು ಕವಿ ಶಿವಬಾಬಾ ನಾಯ್ಕರವರು , ೨೦೨೦ ರಲ್ಲಿ ಅಂಕೋಲಾ ನಗರದ ಹೆಸರಾಂತ ಪಿ. ಎಂ. ಪ್ರೌಢಶಾಲೆಯ ವಿಶ್ರಾಂತ ಮುಖ್ಯಾಧ್ಯಾಪಕ ರವೀಂದ್ರ ಕೇಣಿ, ಅವಿಶ್ರಾಂತ ಕೋವಿಡ್ ಸೇವಾ ದುರಂಧರೆ ಡಾ॥ ಅರ್ಚನಾ ನಾಯಕ್ ಹಾಗೂ ಸೌಹಾರ್ಧತೆಗೆ ಹೆಸರಾದ ನವಾಜ್ ಶೇಖ್ ರವರು ಬಾಪು ಸದ್ಭಾವನಾ ಪುರಸ್ಕಾರಕ್ಕೆ ಭಾಜನರಾಗಿದ್ದು ,ಡಾ॥ ಗಜಾನನ ನಾಯಕ ರವರು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕಾಯಕಲ್ಪವನ್ನು ಒದಗಿಸಿ ಸಲ್ಲಿಸುತ್ತಿರುವ ಅನುಪಮ ಸೇವೆಯನ್ನು ಗುರುತಿಸಿ ಹಾಗೂ ಉತ್ತರ ಕನ್ನಡ ಮೂಲದ ಜಿ .ಎಸ್. ಭಟ್ ರವರು ಉಡುಪಿ ಜಿಲ್ಲೆಯಲ್ಲಿ ಶೈಕ್ಷಣಿಕ ಕಳಕಳಿಯನ್ನು ತೋರಿ ಸುಪರಿಚಿತರಾಗಿರುವುದನ್ನು ಗಮನಿಸಿ ,ಇವರಿಬ್ಬರನ್ನು ಪ್ರಸಕ್ತ ವರ್ಷದ ಪುರಸ್ಕಾರಕ್ಕೆ ಆಯ್ಕೆ ಗೊಳಿಸಲಾಗಿದೆಯೆಂದು ಆಯ್ಕೆ ಸಮಿತಿಯ ಅಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿಯವರು ಅಭಿಪ್ರಾಯಿಸಿದ್ದಾರೆ.

RELATED ARTICLES  ಹೆಬ್ಬಾವಿನ ಮರಿ ನುಂಗಲು ಯತ್ನಿಸಿದ ಕಾಳಿಂಗ ಸರ್ಪ