ಕಾರವಾರ : ಅಪಘಾನಿಸ್ಥಾನದಲ್ಲಿ ನಡೆದಿರುವ ಘಟನಾವಳಿಗಳು ಹಾಗೂ ಇದೀಗಿನ ವರದಿಗಳು ನಿಜವಾಗಿಯೂ ಭಯಾನಕ ಎನಿಸುತ್ತಿದೆ. ಅಂತಹ ಕಠಿಣವಾದ ಪರಿಸ್ಥಿತಿಯಲ್ಲಿದ್ದು ಇದೀಗ ವಾಪಸ್ ಮನೆ ಸೇರಿರುವ ಕಾರವಾರ ತಾಲೂಕಿನ ಸದಾಶಿವಗಡ ಮೂಲದ ಯುವಕ ಹಾಗೂ ಆತನ ಬರುವಿಕೆಗಾಗಿ ಕಾದು ಕುಳಿತಿದ್ದ ಆತನ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಅಲ್ಲಿನ ಪರಿಸ್ಥಿತಿಯ ಬಗ್ಗೆ ಟಿವಿಗಳಲ್ಲಿ ಕಂಡು ರಾಜೇಶ್‌ನ ಕುಟುಂಬ ಆತಂಕಗೊಂಡಿತ್ತು. ಆದರೀಗ ಮನೆಯ ಮಗ ಸುರಕ್ಷಿತ ವಾಪಸ್ಸಾದ ಬಳಿಕ ಕುಟುಂಬದವರು ಸಂತಸ ವ್ಯಕ್ತಪಡಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಉದ್ಯೋಗದಲ್ಲಿದ್ದ ಉತ್ತರ ಕನ್ನಡ ಜಿಲ್ಲೆ ಯ ಕಾರವಾರದ ಸದಾಶಿವಗಡ ತಾರೀವಾಡದ ರಾಜೇಶ್ ಪಡುವಳಕರ ಸುರಕ್ಷಿತವಾಗಿ ಕಾಬೂಲ್‌ನಿಂದ ಏರ್‌ಲಿಫ್ಟ್ ಮೂಲಕ ದೆಹಲಿಗೆ ಬಂದು, ಅಲ್ಲಿಂದ ಮಂಗಳವಾರ ಬೆಳಿಗ್ಗೆ ಕಾರವಾರಕ್ಕೆ ಮರಳಿದ್ದಾರೆ.
ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿ ರಾಜೇಶ್ ಅಮೆರಿಕದ ಇಕೋಲೋಗ್ ಕಂಪೆನಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಈ ಕಂಪನಿಯಲ್ಲಿ 700ರಷ್ಟು ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಇದು ಅಮೆರಿಕ ಸೇನೆಗೆ ಕ್ಯಾಟರಿಂಗ್ ಸೇರಿದಂತೆ ಇನ್ನಿತರ ಅವಶ್ಯಕತೆಗಳನ್ನು ಪೂರೈಸುತ್ತಿತ್ತು.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ನಡೆಸಿ, ಕಾಬೂಲ್‌ಅನ್ನು ತನ್ನ ಸುಪರ್ದಿಗೆ ಪಡೆಯುವ ವೇಳೆ ರಾಜೇಶ್ ಅಮೆರಿಕ ಸೇನೆಯ ಆಶ್ರಯದಲ್ಲಿದ್ದ. ಅಮೆರಿಕ ಸೇನೆಯು ಭಾನುವಾರ ಕಾಬೂಲ್‌ನಿಂದ ಕತಾರ್‌ಗೆ ಅವರನ್ನು ಕರೆದೊಯ್ದು, ಅಲ್ಲಿಂದ ಭಾರತೀಯ ಸೇನೆಯು ತನ್ನ ವಿಮಾನದ ಮೂಲಕ ದೆಹಲಿಗೆ ಕರೆತಂದಿತ್ತು. ಅಲ್ಲಿಂದ ಮುಂಬೈ- ಗೋವಾ ಮಾರ್ಗವಾಗಿ ಇಂದು ಬೆಳಿಗ್ಗೆ ರಾಜೇಶ್ ಕಾರವಾರಕ್ಕೆ ತಲುಪಿದ್ದಾರೆ.