ಅಂಕೋಲಾ : ರಸ್ತೆಯ ಪಕ್ಕದಲ್ಲಿರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕಾರೊಂದು ಹೊತ್ತಿ ಉರಿದ ಘಟನೆ ರಾ.ಹೆ. 63ರ ಅಂಕೋಲಾ – ಹುಬ್ಬಳ್ಳಿ ಮಾರ್ಗ ಮಧ್ಯೆ ಹೆಬ್ಬುಳ ಬಳಿ ಸಂಭವಿಸಿದೆ. ಈ ರಸ್ತೆ ಅಪಘಾತದ ವೇಳೆ,ಟಾಟಾ ಕಂಪೆನಿಯ ಟಿಗೋ ಕಾರ್ ಪೂರ್ತಿ ಸುಟ್ಟು ಕರಕಲಾಗಿದ್ದು ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಧಾರವಾಡದಿಂದ ಕುಮಟಾಕ್ಕೆ ತೆರಳುತ್ತಿದ್ದ ಈ ವಾಹನ ಹೆಬ್ಬುಳ ಬಳಿ ಚಾಲಕನ ನಿಯಂತ್ರಣ ತಪ್ಪಿ,ರಸ್ತೆಯಂಚಿನ ವಿದ್ಯುತ್ ಕಂಬದ ಬಳಿ ಹೊರಳಿದ ಪರಿಣಾಮ ಅದಾವುದೋ ಕಾರಣದಿಂದ ಆಕಸ್ಮಿಕ ಬೆಂಕಿ ಹತ್ತಿಕೊಂಡಿರುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಅಪಘಾತದ ತೀವ್ರತೆ ನೋಡಿ ರಸ್ತೆಯಲ್ಲಿ ಓಡಾಡುವ ಇತರ ಸವಾರರು ಹಾಗೂ ಸನಿಹದ ಗ್ರಾಮಸ್ಥರು ಕ್ಷಣಕಾಲ ದಂಗಾಗಿದ್ದರು. ಆದರೆ ಅದೃಷ್ಟವಶಾತ್ ಕಾರ್ ಚಾಲಕನಿಗೆ ಯಾವುದೇ ತೊಂದರೆಯಾಗಿಲ್ಲ.
ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದ್ದರು. ಈ ರಸ್ತೆ ಅವಘಡದಿಂದ ರಾಷ್ಟ್ರೀಯ ಹೆದ್ದಾರಿ ಸಂಚಾರದಲ್ಲಿ ಕೆಲಕಾಲ ವೃತ್ಯಯವಾಗಿತ್ತು .
ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು,ಪೊಲೀಸ್ ಹಾಗೂ ಇತರರು ಹಾಜರಿದ್ದು, ಸಂಚಾರ ಸುರಕ್ಷತೆ ಹಾಗೂ ಸಂಚಾರ ಯೋಗ್ಯರೀತಿಯಲ್ಲಿ ಎಲ್ಲ ವ್ಯವಸ್ಥೆ ಕೈಗೊಂಡಿದ್ದಾರೆ.