ಸಮಾಜಕ್ಕಾಗಿ ಮಾಡುವ ಸಮರ್ಪಣೆ ಅಥವಾ ಕೆಲಸವು ಔದಾರ್ಯವಲ್ಲ. ಅದು ಕರ್ತವ್ಯವೇ ಆಗಿದೆ. ಮನುಷ್ಯ ಸಂಘಜೀವಿಯಾಗಿದ್ದು, ಸಮಾಜದಲ್ಲಿ ಪರಸ್ಪರ ಸಹಕಾರವಿಲ್ಲದೇ ಜೀವನನಡೆಸಲು ಸಾಧ್ಯವಿಲ್ಲ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಗಿರಿನಗರದ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ “ವಿಶ್ವವಿದ್ಯಾ~ ಚಾತುರ್ಮಾಸ್ಯ” ದ ಸಂದರ್ಭದಲ್ಲಿ *ಶ್ರೀ ಅಖಿಲ ಹವ್ಯಕ ಮಹಾಸಭೆಯಿಂದ ಗುರುಭಿಕ್ಷಾ ಸೇವೆ* ಸ್ವೀಕರಿಸಿ ಮಾತನಾಡಿದ ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಸಂಘಟನೆಗೆ ಹಾಗೂ ಸಮಾಜಕ್ಕೆ ಇರುವೆಯು ಪರಮಾದರ್ಶವಾಗಿದೆ. ಇರುವೆಯ ಶಿಸ್ತು, ವಿಘ್ನಗಳಿಗೆ ಜಗ್ಗದಿರುವುದು, ಅಂತಃಕಲಹ ಇಲ್ಲದಿರುವುದು, ಪರಿಶ್ರಮ, ಭವಿಷ್ಯದ ಯೋಚನೆ ಹಾಗೂ ಪರಸ್ಪರ ಸಹಕಾರದ ಗುಣಗಳನ್ನು ಇರುವೆಯಿಂದ ನೋಡಿ ಕಲಿಯಬಹುದಾಗಿದೆ. ಇರುವೆ ಚಿಕ್ಕದಾದರೂ ಅದರ ಜೀವನದ ಆದರ್ಶ ದೊಡ್ಡದು ಎಂದರು.

RELATED ARTICLES  ಕೊಂಕಣದಲ್ಲಿ ‘ವಿನಯಸ್ಮøತಿ’ ಹಾಗೂ ‘ಕೊಂಕಣಿ ಮಾನ್ಯತಾ ದಿವಸ್’

ಹವ್ಯಕ ಮಹಾಸಭೆಯು ಉತ್ತಮ ಕಾರ್ಯಗಳನ್ನು ಮಾಡುತ್ತಿದ್ದು, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುತ್ತಿದೆ. ಪಾರದರ್ಶಕ ಆಡಳಿತ ವ್ಯವಸ್ಥೆಯ ಮೂಲಕ ಸಮಾಜ ಸಂಘಟನೆಯಲ್ಲಿ ತೊಡಗಿರುವ ಮಹಾಸಭೆಯ ಕಾರ್ಯ ಶ್ಲಾಘನೀಯ ಎಂದ ಶ್ರೀಗಳು, ಹವ್ಯಕ ಮಹಾಸಭೆಯ
ಕಾರ್ಯಗಳ ಬಗ್ಗೆ ಪದಾಧಿಕಾರಿಗಳಿಂದ ಮಾಹಿತಿ ಪಡೆದು, ಮಹಾಸಭೆಯ ಎಲ್ಲಾ ಕಾರ್ಯಗಳಿಗೆ ಶ್ರೀರಾಮಚಂದ್ರಾಪುರ ಮಠದ ಸಂಪೂರ್ಣ ಸಹಕಾರವಿರುವುದಾಗಿ ತಿಳಿಸಿದರು.

ಹವ್ಯಕ ಮಹಾಸಭೆಯ ಅಧ್ಯಕ್ಷರಾದ *ಡಾ.ಗಿರಿಧರ ಕಜೆ* ಮಾತನಾಡಿ, ಮಹಾಸಭೆಗೆ ISO ಪ್ರಮಾಣಪತ್ರ ದೊರಕಿದ್ದು, ಪಾರದರ್ಶಕ ಹಾಗೂ ಸುವ್ಯವಸ್ಥಿತ ಆಡಳಿತಕ್ಕೆ ಮನ್ನಣೆ ದೊರಕಿದೆ. ಕೊರೋನಾ ಹಾಗೂ ನೆರೆ ಸಂತ್ರಸ್ತರಾದ ಹವ್ಯಕ ಸಮುದಾಯದವರಿಗೆ ಮಹಾಸಭೆಯ ವತಿಯಿಂದ ಅಗತ್ಯ ಸಹಕಾರ ನೀಡಲಾಗುತ್ತಿದ್ದು, ಸಮಾಜದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

RELATED ARTICLES  ದೀಪಿಕಾ ಪಡುಕೋಣೆ ತಲೆ ಕಡಿದರೆ ಐದು ಕೋಟಿ ರೂ. ಬಹುಮಾನ !

ಕೋಶಾಧಿಕಾರಿ ಶ್ರೀ ಕೃಷ್ಣಮೂರ್ತಿ ಭಟ್ ಯಲಹಂಕ ಮಾತನಾಡಿ, ಮಹಾಸಭೆಯಲ್ಲಿ ಆರ್ಥಿಕ ಶಿಸ್ತಿಗೆ ಪ್ರಾಶಸ್ತ್ಯ ನೀಡಲಾಗಿದ್ದು, 99% ವ್ಯವಹಾರಗಳನ್ನು ನಗದು ರಹಿತವಾಗಿ ಮಾಡಲಾಗುತ್ತಿದೆ ಎಂದರು. ಉಪಾಧ್ಯಕ್ಷರಾದ ಶ್ರೀಧರ ಭಟ್ ಕೆಕ್ಕಾರು ಮಹಾಸಭೆಯ ಕಾರ್ಯಗಳ ಮಾಹಿತಿ ನೀಡಿದರು.

ಕಾರ್ಯದರ್ಶಿಗಳಾದ ಪ್ರಶಾಂತ್ ಭಟ್ ಯಲ್ಲಾಪುರ, ಶ್ರೀಧರ ಭಟ್ ಸಾಲೇಕೊಪ್ಪ ಸೇರಿದಂತೆ ಹವ್ಯಕ ಮಹಾಸಭೆ ನಿರ್ದೇಶಕರು, ವಿವಿಧ ಭಾಗಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಾಸಭೆಯಿಂದ ಗುರುಭಿಕ್ಷಾಸೇವೆ, ಶ್ರೀಗುರು ಪಾದುಕಾ ಸೇವೆ, ಗೋಪೂಜೆ ಮುಂತಾದವು ಸಮರ್ಪಿಸಲ್ಪಟ್ಟಿತು.