ಕುಮಟಾ: ಕನ್ನಡ ಸಾಹಿತ್ಯ ಪರಿಷತ್ ಹಾಗೂ ಕನ್ನಡ ಜಾಗೃತಿ ಸಮಿತಿಯ ಪದಾಧಿಕಾರಿಗಳು ಸಾರಿಗೆ ವ್ಯವಸ್ಥೆಯಲ್ಲಿ ಕಡ್ಡಾಯವಾಗಿ ಕನ್ನಡ ಬಳಕೆಯಾಗಬೇಕೆಂದು ಕುಮಟಾ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ರಜತ್ ಸಕ್ಪಾಲ್ ಅವರಿಗೆ ಕನ್ನಡ ಭಾಷೆ ಬಳಕೆಯ ಹಕ್ಕೊತ್ತಾಯ ಕುರಿತಾದ ಕರಪತ್ರ ನೀಡಿ ರೈಲ್ವೆ ನಿಲ್ದಾಣದಲ್ಲಿ ಕನ್ನಡ ಬಳಕೆಯಾಗುವಂತೆ ವಿನಂತಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಕಾಯಕದ ವರ್ಷವೆಂದು ಘೋಷಿಸಿದ್ದು ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಜಾಗೃತಿ ಅಭಿಯಾನ ಹಮ್ಮಿಕೊಂಡಿದೆ.ಈ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರು ರೈಲ್ವೆ ನಿಲ್ದಾಣಕ್ಕೆ ತೆರಳಿ ಕನ್ನಡ ಜಾಗೃತಿ ಮೂಡಿಸಿದರು.ಕಸಾಪ ಅಧ್ಯಕ್ಷ ಶ್ರೀಧರ ಗೌಡ ಮಾತನಾಡಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರಿಗೆ ಕನ್ನಡದ ಕುರಿತು ಅರಿವು ಮೂಡಿಸಬೇಕು.ಇಲ್ಲಿ ರೈಲ್ವೆ ಪ್ರಯಾಣದ ಟಿಕೆಟ್, ಸೂಚನಾ ಫಲಕ ಸೇರಿದಂತೆ ಎಲ್ಲೆಡೆ ಕನ್ನಡ ಬಳಕೆಯಾಗಬೇಕು.ಸಾರಿಗೆ ವ್ಯವಸ್ಥೆಯಲ್ಲಿ ಪ್ರತಿನಿತ್ಯ ಸಾವಿರಕ್ಕೂ ಅಧಿಕ ಬೇರೆಬೇರೆ ರಾಜ್ಯದ ಪ್ರಯಾಣಿಕರು ಬರುವುದರಿಂದ ಕನ್ನಡ ನೆಲದ ಬಗ್ಗೆ ಅವರಿಗೂ ಅರಿವು ಮೂಡಬೇಕು ಎಂದರು.
ಈ ಸಂದರ್ಭದಲ್ಲಿ ಕಸಾಪ ಸದಸ್ಯೆ ಶೈಲಾ ಗುನಗಿ, ಕನ್ನಡ ಅಭಿವೃದ್ಧಿ ಸಂಘ ಉ.ಕನ್ನಡ ದ ಸದಸ್ಯ ಮಂಜುನಾಥ ಎಂ ನಾಯ್ಕ, ಪ್ರಶಾಂತ್ ಹೆಗಡೆ ಇದ್ದರು.