ಕಾರವಾರ : ಕುಡಿತದ ಅಮಲು ಏನು ಮಾಡಿಸುತ್ತೆ ಎಂಬುದು ಯಾರಿಗೂ ತಿಳಿಯಲ್ಲ. ಕುಡಿದ ಅಮಲಿನಲ್ಲಿ ತಾನು ಏನು ಮಾಡುತ್ತಿದ್ದೇನೆ ಎಂಬುದನ್ನು ಅರಿಯದೆ ಕಾರವಾರದ ಕೋಣಿ ಬೀಚ್ ನಲ್ಲಿ ನಿಲ್ಲಿಸಿಟ್ಟಿದ್ದ ದೋಣಿಯನ್ನು ಕದ್ದು ವ್ಯಕ್ತಿಯೊಬ್ಬ ಲೈಟ್ ಹೌಸ್ ನೋಡಲು ಹೋದ ಘಟನೆ ವರದಿಯಾಗಿದೆ.
ಮಹಾರಾಷ್ಟ್ರ ಮೂಲದ 21 ರ ಯುವಕ ಸಪ್ನಲ್ ಎಂಬ ವ್ಯಕ್ತಿಯೇ ಈ ರೀತಿ ಮಾಡಿದವನು. ಈತ ಈ ಘಟನೆಯಲ್ಲಿ ಅರಬ್ಬಿ ಸಮುದ್ರದ ಮಧ್ಯದಲ್ಲಿರುವ ಲೈಟ್ ಹೌಸ್ ಪಕ್ಕದ ದ್ವೀಪದಲ್ಲಿ ಸಿಲುಕಿಕೊಂಡ ಘಟನೆ ಇಂದು ನಡೆದಿದ್ದು ಕರಾವಳಿ ಕಾವಲುಪಡೆ ಸಿಬ್ಬಂದಿಗಳು ರಕ್ಷಣೆ ಮಾಡಿದ್ದಾರೆ. ಈತನನ್ನು ಕಾರವಾರದ ಆಸ್ಪತ್ರೆಗೆ ದಾಖಲಿಸಿಲಾಗಿದೆ ಎಂದು ವರದಿಯಾಗಿದೆ.
ಕಾರವಾರದ ಕೋಣಿ ಬೀಚ್ ಗೆ ಬಂದಿದ್ದ ಈತ ಅರಬ್ಬಿ ಸಮುದ್ರದ ಮಧ್ಯಭಾಗದಲ್ಲಿರುವ ಲೈಟ್ ಹೌಸ್ ನೋಡುವ ಹಂಬಲವಾಗಿದೆ. ಕುಡಿದ ಮತ್ತಲ್ಲಿ ಬೀಚ್ ನಲ್ಲಿ ಇಟ್ಟಿದ್ದ “ಓಂ ಯತಾಳ” ಎಂಬ ನಾಡದೋಣಿ ಯನ್ನು ಕದ್ದು ಸಮುದ್ರದಲ್ಲಿ ಹೋಗಿ ಲೈಟ್ ಹೌಸ್ ತಲುಪಿದ್ದಾನೆ. ಈ ವೇಳೆ ದೋಣಿಯನ್ನು ಲಂಗುರನ್ನು ಸರಿಯಾಗಿ ಹಾಕದೇ ಲೈಟ್ ಹೌಸ್ ಬಳಿಯ ದ್ವೀಪದಲ್ಲಿರುವ ಬಂಡೆಯ ಬಳಿ ಸಿಲುಕಿಕೊಂಡಿದೆ ಎನ್ನಲಾಗಿದೆ.
ಈ ಕುರಿತು ಮಾಹಿತಿ ಪಡೆದ ಕರಾವಳಿ ಕಾವಲುಪಡೆ ಸಿಪಿಐ ನಿಶ್ಚಲ್ ಕುಮಾರ್ ರವರು ಇಂಟರ್ ಸೆಫ್ಟರ್ ಬೋಟ್ ಮೂಲಕ ಅಲ್ಲಿಗೆ ತೆರಳಿ ಈತನನ್ನು ರಕ್ಷಿಸಿ ಕರೆತಂದಿದ್ದಾರೆ.