ಕುಮಟಾ: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಯಾಣಕ್ಕೆ ಎಲ್ಲಾ ವಯೋಮಾನದ ಯಾತ್ರಿಕರು ಭೇಟಿ ನೀಡುವಂಥ ವ್ಯವಸ್ಥೆ ಕಲ್ಪಿಸಲು ಶಾಸಕ ದಿನಕರ ಶೆಟ್ಟಿ ಅವರು ಹಿಂದಿನ ವರ್ಷ ರೋಪ್ ವೇ ನಿರ್ಮಾಣದ ಕನಸಿನ ಬಗ್ಗೆ ಹೇಳಿಕೊಂಡಿದ್ದರು. ಅದಕ್ಕೀಗ ಒಂದು ರೂಪುರೇಷೆ ಸಿಗುತ್ತಿದ್ದು, ಲೋಕೋಪಯೋಗಿ ಇಲಾಖೆಯಿಂದ ಸೋಮವಾರ ಸರ್ವೇ ಕಾರ್ಯ ನಡೆದಿದೆ.

ಸರಿ ಸುಮಾರು ಒಂದು ವರ್ಷದ ಹಿಂದೆ ಕರಾವಳಿ ಮುಂಜಾವು ಈ ಬಗ್ಗೆ ವಿಶೇಷ ವರದಿಯನ್ನು ಮಾಡಿತ್ತು. ದಟ್ಟಡವಿಯಲ್ಲಿ ನಡಿಗೆಯಲ್ಲಿ ಸಾಗಿ, ಕಿಲೋಮೀಟರ್ ವರೆಗೆ ಪ್ರಕೃತಿಯಲ್ಲಿನ ಕಲರವವನ್ನು, ಇಂಪಾದ ಗಾಳಿಯನ್ನು ಆಸ್ವಾದಿಸುತ್ತಾ ಕೊನೆಯಲ್ಲಿ ನೂರಾರು ಮೆಟ್ಟಿಲುಗಳನ್ನು ಹತ್ತಿ, ಕುತ್ತಿಗೆಯನ್ನು ತೊಂಭತ್ತರ ಡಿಗ್ರಿಯಲ್ಲಿ ಮೇಲೆತ್ತಿ ಯಾಣದ ಭೈರವೇಶ್ವರ ಶಿಖರವನ್ನು ನೋಡುವುದೇ ಕಣ್ಣಿಗೆ ಹಬ್ಬ. ಆದರೆ, ಪ್ರಾಯದ ಯುವಕ ಯುವತಿಯರು ಸುಲಭವಾಗಿ ಹೋಗಬಹುದಾದ, ಮಧ್ಯವಯಸ್ಕರು ಪ್ರಯಾಸ ಪಟ್ಟು ವೀಕ್ಷಣೆ ಮಾಡಬಹುದಾದ ಪ್ರದೇಶವಿದು.

ವೃದ್ಧರಿಗಂತೂ ಯಾಣ ಮರೀಚಿಕೆಯೇ. ಸಣ್ಣಪುಟ್ಟ ಅನಾರೋಗ್ಯ ಹೊಂದಿದವರು ಕೂಡ ಇಲ್ಲಿಗೆ ಬರುವ ಸಾಹಸಕ್ಕೆ ಕೈ ಹಾಕುವುದಿಲ್ಲ. ಕೇವಲ ಫೋಟೋ, ವೀಡಿಯೋಗಳಲ್ಲಿ ನೋಡಿ ಇವರೆಲ್ಲರೂ ಸಂತೃಪ್ತರಾಗಬೇಕಿತ್ತು. ಪುಟ್ಟ ಮಕ್ಕಳೊಂದಿಗೆ ಕುಟುಂಬ ಸಮೇತ ಹೋಗುವುದು ಕೂಡ ಸ್ವಲ್ಪ ಕಷ್ಟವೆನಿಸುವ ಟಾಸ್ಕ್ ಎನ್ನಬಹುದು. ಹೀಗಾಗಿ ಎಲ್ಲಾ ವಯಸ್ಸಿನವರು ಕೂಡ ಮುಕ್ತವಾಗಿ, ಸಂಭ್ರಮದಿಂದ ಯಾಣದ ಸೊಬಗನ್ನು ನೋಡುವಂತಾಗಬೇಕು ಎಂಬ ದಿಸೆಯಲ್ಲಿ ಶಾಸಕ ದಿನಕರ ಶೆಟ್ಟಿ ಅವರು ಇಲ್ಲಿ ಥೈಲ್ಯಾಂಡ್ ಮಾದರಿಯಲ್ಲಿ ರೋಪ್ ವೇ ಮಾಡುವ ಮಹದಾಸೆ ಹೊಂದಿದ್ದರು. ಈ ಬಗ್ಗೆ ಮುಂಜಾವು ಜೊತೆಗೆ ವಿಶೇಷವಾಗಿ ಹೇಳಿಕೊಂಡಿದ್ದರು.

RELATED ARTICLES  ಭೀಕರ ಅಪಘಾತ : ಸ್ಥಳದಲ್ಲಿಯೇ ಓರ್ವ ಸಾವು.

ಆಶಯ ವ್ಯಕ್ತಪಡಿಸಿದ ವರ್ಷದೊಳಗೆಯೇ ಅದನ್ನು ಕಾರ್ಯರೂಪಕ್ಕೆ ತರುವ ವಿಶೇಷ ಪ್ರಯತ್ನ ನಡೆಸಿ ಇದೀಗ ಕ್ಷೇತ್ರದ ಜನರ ಗಮನ ಸೆಳೆದಿದ್ದಾರೆ. ಶುರುವಿಗೆ ಎರಡೂಕಾಲು ಕೋಟಿ ರು. ಪ್ರಸ್ತಾವನೆ ಸಲ್ಲಿಸಿದ್ದರು. ಜೊತೆಗೆ ಕಾಮಗಾರಿಗೆ ಒಟ್ಟು ಎಷ್ಟು ಅನುದಾನ ಬೇಕಾಗಬಹುದು ಎಂಬುದರ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಂಡು ಎಸ್ಟಿಮೇಟ್ ಮಾಡಲಾಗುತ್ತಿದೆ.

ಈ ಭಾಗದಲ್ಲಿ ರೋಪ್ ವೇ ಹೊಸದಾಗಿದ್ದು, ಅದನ್ನು ನಿರ್ಮಿಸಬಲ್ಲವರು ಸಿಗುವುದು ಕಷ್ಟಸಾಧ್ಯ. ಹೀಗಾಗಿ ತಮಿಳುನಾಡಿನ ಮೂಲದ ಏಜೆಂಟ್ ಒಬ್ಬರ ಮೂಲಕ ಮಾಡಿಸಲಾಗುತ್ತಿದೆ. ಸುಮಾರು 350 ಮೀಟರ್ ಉದ್ದದ ರೋಪ್ ವೇ ನಿರ್ಮಾಣ ಆಗಲಿದೆ. ಹೆಚ್ಚು ಏರು ಹೊಂದಿರುವ ಪ್ರದೇಶವನ್ನು ರೋಪ್ ವೇ ನಿರ್ಮಾಣಕ್ಕೆ ಪ್ರಶಸ್ತ ಸ್ಥಳ ಎಂದು ಗುರುತಿಸಿಕೊಳ್ಳಲಾಗಿದೆ.

RELATED ARTICLES  ಟಿಪ್ಪರ್ ಹರಿದು ಪಾದಚಾರಿ ಸಾವು.

ಉತ್ತರಕನ್ನಡ ಜಿಲ್ಲೆ ನೂರಾರು ವಿಶೇಷತೆಗಳನ್ನು ಹೊಂದಿದ್ದು ಪ್ರತಿಯೊಂದು ತಾಲ್ಲೂಕು ಕೂಡ ಒಂದೊಂದು ಕಾರಣದಿಂದ ಉತ್ತಮ ಪ್ರವಾಸಿತಾಣ ಎನಿಸಿಕೊಂಡಿದೆ. ಇಲ್ಲಿನಷ್ಟು ವೈವಿಧ್ಯಮಯ ಪ್ರದೇಶಗಳು ಮತ್ತೆಲ್ಲೂ ಸಿಗದು. ಅತಿ ಅಪರೂಪವಾದ ರೋಪ್ ವೇ ನಿರ್ಮಾಣವಾದ ಮೇಲೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಶಾಸಕರದ್ದು ಮಹತ್ತರ ಕೊಡುಗೆ ಎನಿಸಲಿದೆ. ಈಗಿನದಕ್ಕಿಂತ ದುಪ್ಪಟ್ಟು ಪ್ರವಾಸಿಗರನ್ನು ಸೆಳೆಯಬಲ್ಲ ಆಕರ್ಷಣೀಯ ಅಂಶ ಇದಕ್ಕಿದೆ ಎಂದು ಲೆಕ್ಕಾಚಾರ ಹಾಕಲಾಗಿದೆ.

ಯಾಣ ಅತ್ಯಂತ ವಿಶೇಷ ತಾಣ. ನನ್ನ ಅವಧಿಯಲ್ಲಿ ಅಲ್ಲಿನ ಸರ್ವತೋಮುಖ ಅಭಿವೃಧ್ಧಿ ಮಾಡಿ, ಆ ಪ್ರದೇಶವನ್ನು ಮತ್ತೊಂದು ಮಟ್ಟಕ್ಕೆ ತೆಗೆದುಕೊಂಡು ಹೋಗುವ ಚಿಂತನೆ ನನ್ನದು. – ದಿನಕರ ಶೆಟ್ಟಿ, ಶಾಸಕ

ರೋಪ್ ವೇ ನಿರ್ಮಾಣಕ್ಕಾಗಿ ಸೋಮವಾರ ಇಲಾಖೆ ವತಿಯಿಂದ ಸರ್ವೇ ಕಾರ್ಯ ನಡೆದಿದೆ. ಇದು ಸಂತಸದಾಯಕ ವಿಚಾರ. ರೋಪ್ ವೇ ಜೊತೆಗೆ ಹೋಟೆಲ್, ಯಾತ್ರಿ ನಿವಾಸ ಮುಂತಾದವುಗಳ ನಿರ್ಮಾಣದ ಮೂಲಕ ಯಾಣವು ಉನ್ನತ ದರ್ಜೆಯ ತಾಣ ಆಗಲಿದೆ ಎಂಬ ಭರವಸೆ ಇದೆ.
– ಗಜಾನನ ಪೈ, ಮಾಜಿ ಜಿ.ಪಂ.ಸದಸ್ಯರು ಅಳಕೊಡ್