ಅಂಕೋಲಾ: ಉತ್ತರಕನ್ನಡದಲ್ಲಿ ಮತ್ತೆ ಅಕ್ರಮ ಜಾನುವಾರು ಸಾಗಾಟ ಪ್ರಕರಣ ಸದ್ದು ಮಾಡುತ್ತಿದ್ದು, ಎಮ್ಮೆ ಸಾಗಾಟ ಮಾಡುತ್ತಿದ್ದವರನ್ನು ಬಂಧಿಸಿದ ಘಟನೆ ವರದಿಯಾಗಿದೆ.
ಅಕ್ರಮವಾಗಿ ತಾಲೂಕಿನಲ್ಲಿ ಎಮ್ಮೆ ಸಾಗಾಟ ಮಾಡುತ್ತಿದ್ದ ಈರ್ವರನ್ನು ಪೊಲೀಸರು ಬಂಧಿಸಿ ವಾಹನವನ್ನು ಜಪ್ತಿ ಮಾಡಿದ್ದಾರೆ. ಕಲಘಟಗಿ ಮೂಲದ ನಾಗರಾಜ ಕಟ್ಟಿಮನಿ ಮತ್ತು ಬಸವಣ್ಣಯ್ಯ ಹಿರೇಮಠ ಬಂಧಿತ ವ್ಯಕ್ತಿಗಳಾಗಿದ್ದಾರೆ.
ಹಿಚ್ಚಡದ ರೈತನೊಬ್ಬನಿಂದ ಖರೀದಿಸಿದ ಎಮ್ಮೆಯನ್ನು ಟಾಟಾ ಏಸ್ ವಾಹನದಲ್ಲಿ ಯಾವುದೇ ಪರವಾನಗಿ ಇಲ್ಲದೆ ಕಲಘಟಗಿಗೆ ಸಾಗಿಸುತ್ತಿದ್ದ ವೇಳೆ ಖಚಿತ ಮಾಹಿತಿಯ ಮೇರೆಗೆ ಸಿಪಿಐ ಸಂತೋಶ್ ಶೆಟ್ಟಿ ನೇತೃತ್ವದಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ವರದರಾಜ್ ಹೋಟೆಲಿನ ಬಳಿ ಪೊಲೀಸರು ವಾಹನವನ್ನು ತಡೆದು ಪರಿಶೀಲಿಸಿದಾಗ ಗಾಯಗಳಾಗಿದ್ದ ಎಮ್ಮೆಗಳು ಕಂಡುಬಂದಿದೆ.
ವಶಪಡಿಸಿಕೊಂಡ ಎಮ್ಮೆಯನ್ನು ಹೊನ್ನಾವರದ ಗೇರುಸೊಪ್ಪ ಗೋ ಶಾಲೆಗೆ ಸೇರಿಸಿದ್ದಾರೆ. ಈ ಸಂದರ್ಭದಲ್ಲಿ ಪಿಎಸೈ ಪ್ರವೀಣ್‌ಕುಮಾರ್ ಆರ್. ಪ್ರೇಮನಗೌಡ ಪಾಟೀಲ್, ಸಿಬ್ಬಂದಿ ಆಸಿಫ್ ಕುಂಕುರು, ಮಂಜುನಾಥ ಲಕ್ಷಾಪುರ್ ಇದ್ದರು.