ಶಿರಸಿ: ಮಲೆನಾಡಿನ ಪ್ರಾದೇಶಿಕ ಸೊಗಡಿನಲ್ಲೊಂದಾದ ಕೈ ಚಕ್ಕುಲಿಯ ರುಚಿ ವಿಶೇಷವಾದದ್ದು. ಬಹಳ ನಾಜೂಕಿನ ಅತಿವಿರಳ ಕಲೆಯಾದ ಕೈ ಚಕ್ಕುಲಿ ತಯಾರಿಕೆ ಬಹಳ ಹಳೆಯ ಸಂಪ್ರದಾಯಿಕ ಹಾಗೂ ವಿಶೇಷ. ಆದರೆ ಚಕ್ಕುಲಿ ತಯಾರಿಕೆ ಉಪಕರಣಗಳು ಬಂದ ಮೇಲೆ ಕೈ ಚಕ್ಕುಲಿ ಮಾಡುವ ಕಾಯಕ ಮರೆಯಾಗುತ್ತಿರುವ ಕಾರಣ ಈ ತಿನಿಸಿನ ಮಹತ್ವ ಅನೇಕರಿಗೆ ತಿಳಿದಿಲ್ಲ.
ಅಭ್ಯಾಸವಿಲ್ಲದೆ ಬರಲಾರದ ಕೈ ಚಕ್ಕುಲಿ ಕಲೆಯನ್ನು ತರಬೇತಿ ರೂಪದಲ್ಲಿ ಆಸಕ್ತರಿಗೆ ಕಲಿಸುವ ಉದ್ದೇಶದಿಂದ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಯು ಸೆ.3 ಮತ್ತು 4 ರ ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಕೈ ಚಕ್ಕುಲಿ ಕಂಬಳ ಏರ್ಪಡಿಸಿದೆ.
ನೀರ್ನಳ್ಳಿಯ ಶ್ರೀಮತಿ ವೇದಾ ಹೆಗಡೆ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು ಶಂಭುಲಿಂಗ ಹೆಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಡಾ. ರೂಪಾ ಪಾಟೀಲ್ ಭಾಗವಹಿಸಲಿದ್ದಾರೆ.
ಕೈಚಕ್ಕುಲಿಯೊಂದಿಗೆ ಬೇರೆ ಬೇರೆ ಹಿಟ್ಟು, ಸಂಬಾರ ಪದಾರ್ಥಗಳನ್ನು ಉಪಯೋಗಿಸಿ ಉಪಕರಣದ ಮೂಲಕ ತಯಾರಿಸಿದ ಚಕ್ಕುಲಿಯ ಸ್ಪರ್ಧೆಯೂ ಇರಲಿದ್ದು ರುಚಿ ಹಾಗೂ ಬಾಳಿಕೆ ಜಾಸ್ತಿಯಿರುವ ಚಕ್ಕುಲಿಗೆ ಮಾರುಕಟ್ಟೆ ಒದಗಿಸುವ ಕೆಲಸವನ್ನೂ ಕದಂಬದ ಮೂಲಕವೇ ಮಾಡಲಾಗುವುದು.
ಸ್ಪರ್ಧೆಯಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಮುಂಚಿತವಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದ್ದು ಹೆಚ್ಚಿನ ಮಾಹಿತಿಗಾಗಿ ಶ್ರೀವತ್ವ ಹೆಗಡೆ (ಮೊ. 9535502274) | ಕದಂಬ ಮಾರ್ಕೆಟಿಂಗ್ (08384 233163) ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.