ಭಟ್ಕಳ : ತಾಲೂಕಿನ ವಿವಿಧೆಡೆ ಕಾನೂನು ಬಾಹಿರವಾಗಿ ನಡೆಯುತ್ತಿದ್ದ ಓಸಿ ಮಟಕಾ ಅಡ್ಡೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಪೊಲೀಸರು, ಐವರು ಆರೋಪಿಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಆರೋಪಿಗಳನ್ನು ತಾಲೂಕಿನ ಹನುಮಾನ ನಗರದ ಲೋಕೇಶ ಗಣಪತಿ ನಾಯ್ಕ, ಚೌಥನಿ ರಸ್ತೆಯ ಕೃಷ್ಣ ಜಟ್ಟಪ್ಪ ನಾಯ್ಕ, ಮುಳಿಯ ರತ್ನಾಕರ ರಾಮಕೃಷ್ಣ ಶೇಟ್, ಮಂಜುನಾಥ ಜಟ್ಟಪ್ಪ ನಾಯ್ಕ, ರಘುನಾಥ ರಸ್ತೆಯ ಸಂಜಯ ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ. ಐವರು ಆರೋಪಿಗಳಿಂದ ಒಟ್ಟೂ ರೂ .೯೫೩೦ ನಗದು ಹಾಗೂ ಓಸಿ ಬರೆಯಲು ಬಳಸುತ್ತಿದ್ದ ಸಲಕರಣೆಗಳನ್ನು ಪೊಲೀಸರು ಜಫ್ತುಪಡಿಸಿಕೊಂಡಿದ್ದಾರೆ.
ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಹನುಮಂತ ಕುಡಗುಂಟಿ, ಸುಮಾ ತನಿಖೆ ಕೈಗೊಂಡಿದ್ದಾರೆ.
ಇನ್ನೊಂದು ಪ್ರತ್ಯೇಕ ಪ್ರಕರಣದಲ್ಲಿ ಭಟ್ಕಳ ತಾಲೂಕಿನ ಬೆಂಗ್ರೆಯ ಮಲ್ಲಾರಿಯಲ್ಲಿ ಮಟ್ಕಾ ಜುಗರಾಟ ಆಡಿಸಿ ಜನರನ್ನು ವಂಚಿಸುತ್ತಿದ್ದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ನಡೆದಿದೆ.
ಭಟ್ಕಳ ತಾಲೂಕಿನ ಬೆಂಗ್ರೆ ಮಲ್ಲಾರಿ ಕೊಪ್ಪದಮನೆಯ ನಿವಾಸಿ 32 ವರ್ಷದ ಲೋಕೇಶ ಆರೋಪಿಯಾಗಿದ್ದಾನೆ. ಈತನು ಬೆಂಗ್ರೆ-2 ಗ್ರಾಮದ ಮಲ್ಲಾರಿಯಲ್ಲಿ ಕಿರಾಣಿ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಓ.ಸಿ ಮಟಕಾ ಜೂಗಾರಾಟ ನಡೆಸುತ್ತಿದ್ದನು ಎಂಬ ಆರೋಪ ಕೇಳಿಬಂದಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಮುರುಡೇಶ್ವರ ಠಾಣೆ ಪೊಲೀಸರು ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ಆರೋಪಿ ಲೋಕೇಶನನ್ನು ವಶಕ್ಕೆ ಪಡೆದ ಪೊಲೀಸರು ಆತನಿಂದ ಮಟ್ಕಾಜುಗರಾಟದ ಸಲಕರಣೆಗಳು ಹಾಗೂ ನಗದು ಹಣ 1,470 ರೂ. ವಶಕ್ಕೆ ಪಡೆದಿದ್ದಾರೆ.
ಮುರುಡೇಶ್ವರ ಠಾಣೆ ಪಿಎಸ್‌ಐ ರವೀಂದ್ರ ಎಮ್. ಬಿರಾದಾರ ಅವರು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.