ಹೊನ್ನಾವರ : ತಾಲೂಕಿನ ಎಸ್.ಡಿ.ಎಮ್. ಕಾಲೇಜ ಹಾಗೂ ವಿಶ್ವ ವಿದ್ಯಾಲಯ ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಅಂತರ್ ಮಹಾವಿದ್ಯಾಲಯ ಮಹಿಳೆಯರ ಏಕವಲಯ ವಾಲಿಬಾಲ್ ಪಂದ್ಯಾವಳಿ ಹಾಗೂ ಯೂನಿವರ್ಸಿಟಿ ಬ್ಲೂ ಸೆಲೆಕ್ಷನ್ ಕಾರ್ಯಕ್ರಮವನ್ನು ಎಸ್.ಡಿ.ಎಮ್. ಕಾಲೇಜ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ನಿವೃತ್ತ ಡಿ.ಎಫ್.ಓ. ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಯವರು ಉದ್ಘಾಟಿಸಿ ಮಾತನಾಡಿ ಮನುಷ್ಯನ ಜೀವನದಲ್ಲಿ ಶಿಕ್ಷಣದಷ್ಟೇ ಕ್ರೀಡೆಗಳೂ ಸಹ ಪ್ರಮುಖ ಪಾತ್ರ ವಹಿಸುತ್ತವೆ. ಶಿಕ್ಷಣ ಜೀವನವನ್ನು ರೂಪಿಸಿದರೆ ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಸದೃಢತೆಯೊಂದಿಗೆ ಉತ್ತಮ ಆರೋಗ್ಯವನ್ನು ಒದಗಿಸುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಕೊಂಡು ಚಟುವಟಿಕೆಯಿಂದಿರಬೇಕು. ಬೇಟಿ ಬಚಾವೋ, ಬೇಟಿ ಪಢಾವೋ ಎಂಬ ಆಶಯದಂತೆ ಗಂಡುಮಕ್ಕಳಂತೆ ಹೆಣ್ಣುಮಕ್ಕಳಿಗೂ ಕೂಡಾ ಸಮಾನ ಆದ್ಯತೆಯನ್ನು ನೀಡಬೇಕು. ಕಳೆದ ಒಲಿಂಪಿಕ್Àನಲ್ಲಿ ಮಹಿಳೆಯರೇ ಎರಡು ಪದಕಗಳನ್ನು ಗೆದ್ದು ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ. ಈ ಕ್ರೀಡಾ ಕಾರ್ಯಕ್ರಮದಲ್ಲೂ ಮಹಿಳಾ ತಂಡಗಳೇ ಹೆಚ್ಚು ಭಾಗವಹಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಎಲ್ಲಾ ತಂಡಗಳಿಗೆ ಶುಭ ಹಾರೈಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಎಸ್. ಎಸ್. ಹೆಗಡೆಯವರು ಮಾತನಾಡಿ ಕ್ರೀಡೆಗಳು ಉತ್ತಮ ಆರೋಗ್ಯ ನೀಡುವುದರೊಂದಿಗೆ ಮಾನಸಿಕ ಸಮತೋಲನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಸಿಕ್ಕ ಅವಕಾಶ ಹಾಗೂ ಸವಲತ್ತುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಡಾ|| ಎಮ್. ಪಿ. ಕರ್ಕಿ, ಕೃಷ್ಣಮೂರ್ತಿ ಭಟ್, ಎಸ್. ಎನ್. ಭಟ್, ರಾಜು ಭಂಡಾರಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಂಘಟನಾ ಕಾರ್ಯದರ್ಶಿ ಪ್ರೊ|| ಆರ್. ಕೆ. ಮೇಸ್ತ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಶಾಂತ ಮೂಡಲಮನೆ ಕಾರ್ಯಕ್ರಮ ನಿರೂಪಿಸಿದರು.