ಕುಮಟಾ :  ರಾಜ್ಯ ಸರ್ಕಾರ 2021 -22 ನೇ ಸಾಲಿನ ಅತ್ಯುತ್ತಮ ಶಿಕ್ಷಕ ಮತ್ತು ಶಿಕ್ಷಕಿಯರ ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಉತ್ತರಕನ್ನಡ ಜಿಲ್ಲೆಯ ಕುಮಟಾ ತಾಲೂಕಿನವರಾದ ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಾಟಕ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಕಾಂತ ರಾಮ ಪಟಗಾರ ಆಯ್ಕೆಯಾಗಿದ್ದಾರೆ.

ಶ್ರೀಕಾಂತ ಪಟಗಾರ (ಶ್ರೀಕಾಂತ್ ಕುಮಟಾ) ಇವರು ಮೂಲತಃ ಕುಮಟಾ ತಾಲೂಕಿನ ಸಂಡಳ್ಳಿ ಗ್ರಾಮದವರು. ಇವರು ಕಾಲೇಜು ದಿನಗಳಿಂದಲೂ ನಾಟಕ ಅಭಿನಯದಲ್ಲಿ ವಿಶೇಷ ಆಸಕ್ತಿ ಹೊಂದಿದ ವಿದ್ಯಾರ್ಥಿ. ಹಲವಾರು ಸಾಮಾಜಿಕ ನಾಟಕಗಳಲ್ಲಿ ಸ್ತ್ರೀ ಮತ್ತು ಪುರುಷ ವೇಷಧಾರಿಯಾಗಿ ಸೈ ಎನಿಸಿಕೊಂಡಿದ್ದರು.

ಮುಂದೆ ತನ್ನ ಅಭ್ಯಾಸದ ದಿಕ್ಕನ್ನು ಹೆಗ್ಗೋಡಿನ ನೀನಾಸಂ ರಂಗ ಶಿಕ್ಷಣ ಕೇಂದ್ರದತ್ತ ಹೊರಳಿಸಿ ಅಲ್ಲಿ ಅಭಿನಯ ಪದವಿಯನ್ನು ಪಡೆದು ನಾಟಕದಲ್ಲಿ ಸ್ನಾತಕೋತ್ತರ ಪದವಿ ಪಡೆದು, ತಾನು ಕಲಿತ ವಿದ್ಯೆಯನ್ನು ಇತರರಿಗೂ ಹಂಚಬೇಕು ಎಂಬ ಹಂಬಲದೊಂದಿಗೆ ಕುಮಟಾ ತಾಲೂಕಿನಲ್ಲಿ ವಾರಿಧಿ ರಂಗ ಕೇಂದ್ರ (ರಿ.) ಎಂಬ ತನ್ನದೇ ಆದ ರಂಗ ಅಧ್ಯಯನ ಕೇಂದ್ರವನ್ನು ಆರಂಭಿಸಿ ನೂರಾರು ಕಾಲೇಜು ವಿದ್ಯಾರ್ಥಿಗಳಿಗೆ ಅಭಿನಯ ಪಾಠವನ್ನು ಹೇಳಿಕೊಡುತ್ತಿದ್ದರು.

RELATED ARTICLES  ಪತಿ ಪತ್ನಿಯ ನಡುವೆ ವೈಮನಸ್ಸು : ಸಾವಿಗೆ ಶರಣಾದ ಮಹಿಳೆ

ತದನಂತರದಲ್ಲಿ ಇವರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೊಣಂದೂರು ಸರ್ಕಾರಿ ಪ್ರೌಢಶಾಲೆಯಲ್ಲಿ ನಾಟಕ ಶಿಕ್ಷಕರಾಗಿ ಆಯ್ಕೆಯಾದರು. ಹೀಗೆ ಸರ್ಕಾರಿ ಕೆಲಸಕ್ಕೆ ನೇಮಕಗೊಂಡ ಶ್ರೀಕಾಂತ್ ಕುಮಟಾ, ವೃತ್ತಿಗೆ ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಟೊಂಕಕಟ್ಟಿ ನಿಂತರು.

ಪ್ರತಿವರ್ಷವೂ ರಾಷ್ಟ್ರೀಯ ಪಾತ್ರಾಭಿನಯ, ರಾಷ್ಟ್ರೀಯ ಜನಪದ ನೃತ್ಯ ಮತ್ತು ನಾಟಕ ವಿಜ್ಞಾನ ನಾಟಕಗಳನ್ನು ರಚಿಸಿ ನಿರ್ದೇಶಿಸಿ ರಾಜ್ಯ ಮಟ್ಟಕ್ಕೆ ವಿದ್ಯಾರ್ಥಿಗಳನ್ನು ಕರೆದೊಯ್ದು ಅವರ ಪ್ರತಿಭಾ ಪ್ರದರ್ಶನಕ್ಕೆ ಕಾರಣೀಕರ್ತರಾಗಿರುತ್ತಾರೆ. ಶ್ರೀಕಾಂತ ಕುಮಟಾ ಇವರ ನಿರ್ದೇಶನದ ನಾಟಕಗಳು ರಾಷ್ಟ್ರೀಯ ನಾಟಕೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದಿರುವುದನ್ನು ನಾವು ಇಲ್ಲಿ ಸ್ಮರಿಸಬಹುದು

RELATED ARTICLES  ಔಷಧೀಯ ಸಸ್ಯವಾಗಿರುವ ಎಕ್ಕೆಗಿಡವು ಹಲವಾರು ರೋಗಗಳಿಗೆ ರಾಮಬಾಣ..

ತನ್ನ ಸೇವೆಯನ್ನು ಕೇವಲ ಶಾಲೆಗೆ ಸೀಮಿತವಾಗಿರಿಸದೇ ತೀರ್ಥಹಳ್ಳಿ ಸುತ್ತಲಿನ ಸ್ಥಳೀಯರನ್ನು, ಕಾಲೇಜು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಅವರಿಗೂ ಕೂಡ ನಾಟಕಗಳನ್ನು ನಿರ್ದೇಶಿಸಿ ರಾಜ್ಯ ಪರ ರಾಜ್ಯಗಳಲ್ಲೂ ನಾಟಕ ಪ್ರದರ್ಶಿಸಿರುವ ಕೀರ್ತಿ ಶ್ರೀಕಾಂತ್ ಕುಮಟಾ ಇವರಿಗೆ ಸಲ್ಲುತ್ತದೆ. ನೀನಾಸಂ ಸತೀಶ್, ಅಚ್ಚುತ್ ಕುಮಾರ, ರಾಘು ಶಿವಮೊಗ್ಗ ಸೇರಿ ಹತ್ತಾರು ಮೇರು ಕಲಾವಿದರುಗಳ ಸ್ನೇಹವನ್ನು ಹೊಂದಿರುವ ಶ್ರೀಕಾಂತ್ ಕುಮಟಾ ಇವರು ಶಿವಮೊಗ್ಗ ಭಾಗಗಳಲ್ಲಿ ಶ್ರೀಕಾಂತ ಕುಮಟಾ ನೀನಾಸಂ ಎಂದು ಹೆಸರು ಮಾಡಿದ್ದಾರೆ.

ಕ್ರಿಯಾಶೀಲ ಶಿಕ್ಷಕರಾದ ಶ್ರೀಕಾಂತ್ ಕುಮಟಾ ಅವರಿಗೆ ಈ ವರ್ಷ ರಾಜ್ಯ ಸರ್ಕಾರ ನೀಡುವ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿರುವುದು ಹೆಮ್ಮೆಯ ಸಂಗತಿ ಎಂದು ಅವರ ಆತ್ಮೀಯರು, ಸಹೋದ್ಯೋಗಿಗಳು, ಶಿಷ್ಯ ಸಮೂಹ ಅಭಿನಂದಿಸಿದ್ದಾರೆ.