ಕುಮಟಾ: ಇಲ್ಲಿಯ ಜಿ.ಎನ್.ಹೆಗಡೆ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಕೆನರಾ ಹೆಲ್ತ್ ಕೇರ್ ಸೆಂಟರ್ ಮತ್ತು ಸೇವಾ ಭಾರತಿ ಕುಮಟಾ ಇವರು ಕಸ್ತೂರಬಾ ಇಕೋ ಕ್ಲಬ್ ಸಹಯೋಗದೊಂದಿಗೆ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯಲ್ಲಿ ಹದಿ ವಯಸ್ಸಿನ ಹೆಣ್ಣು ಮಕ್ಕಳಲ್ಲಿ ರಕ್ತ ಹೀನತಾ ನಿರ್ಮೂಲನಾ ಅಭಿಯಾನದ ಅಂಗವಾಗಿ ರಕ್ತ ಪರೀಕ್ಷೆ ಮತ್ತು ಕಬ್ಬಿಣಾಂಶದ ಮಾತ್ರೆಗಳನ್ನು ರಕ್ತ ಹೀನತೆ ಹೊಂದಿರುವ ವಿದ್ಯಾರ್ಥಿನಿಯರಿಗೆ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಲಾಯಿತು. ರಕ್ತ ಹೀನತೆಗೆ ಕಾರಣ ಮತ್ತು ಅದರ ನಿರ್ಮೂಲನೆಗೆ ವಹಿಸಬೇಕಾದ ಕಾಳಜಿ ಆಹಾರಾಭ್ಯಾಸದ ಕುರಿತಾಗಿ ಸ್ತ್ರೀ ರೋಗ ತಜ್ಞ ಡಾ.ಜಿ.ಜಿ.ಹೆಗಡೆ ಉಪನ್ಯಾಸವನ್ನು ನೀಡುತ್ತಾ, ಅಮೇರಿಕಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಲಕ್ಷಕ್ಕೆ ಐವರು ರಕ್ತ ಹೀನತೆ ತೊಂದರೆ ಹೊಂದಿದ್ದರೆ, ಭಾರತದಲ್ಲಿ ಅದು ಈಗಲೂ 120 ರಷ್ಟಿದ್ದು ಅದಕ್ಕೆ ಪ್ರಮುಖ ಕಾರಣ ಅಜ್ಞಾನ ಮತ್ತು ಬಡತನವೆಂದು ಅಭಿಪ್ರಾಯಪಟ್ಟರು. ರಕ್ತ ಹೀನತೆಯಿಂದ ಏಕಾಗ್ರತೆ ಸಿದ್ಧಿಸದೇ, ಅಧ್ಯಯನಕ್ಕೆ ಭಂಗ ಉಂಟಾಗುತ್ತದೆಂದರು. ಆದರೆ ಈ ಶಾಲೆಯಲ್ಲಿ ರಕ್ತ ಹೀನತೆ ಹೊಂದಿರುವ ಮಕ್ಕಳು ತೀರಾ ಕಡಿಮೆ ಇದ್ದು ಇದು ಆರೋಗ್ಯಕರ ಲಕ್ಷಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸೇವಾ ಮನೋಭಾವನೆಯನ್ನು ಚಿಕ್ಕವಯಸ್ಸಿನಿಂದಲೇ ಮೈಗೂಡಿಸಿಕೊಳ್ಳುವ ಕ್ರಮಗಳ ಬಗ್ಗೆ ಸವಿಸ್ತಾರವಾಗಿ ಸಾಮಾಜಿಕ ಕಾರ್ಯಕರ್ತ ಮತ್ತು ದಂತವೈದ್ಯ ಡಾ.ಸುರೇಶ ಹೆಗಡೆಯವರು ಮನೋಜ್ಞವಾಗಿ ತಿಳಿಸಿದರು. ವಿದ್ಯಾರ್ಥಿಗಳ ಬೌದ್ಧಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕ ಕಾರ್ಯಕ್ರಮ ಸಂಘಟಿಸಿದ್ದಕ್ಕೆ ಕೆನರಾ ಹೆಲ್ತ್ ಕೇರ್ ಮುಖ್ಯಸ್ಥರ ಕಾರ್ಯವನ್ನು ಮುಖ್ಯಾಧ್ಯಾಪಕ ಎನ್.ಆರ್.ಗಜು ಶ್ಲಾಘಿಸಿದರು. ಪ್ರಾರಂಭದಲ್ಲಿ ಶ್ರೀಲಕ್ಷ್ಮೀ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಶಿಕ್ಷಕ ವಿಷ್ಣು ಭಟ್ಟ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಕಿರಣ ಪ್ರಭು ನಿರೂಪಿಸಿದರೆ ಸುರೇಶ ಪೈ ವಂದಿಸಿದರು.

RELATED ARTICLES  ಅಭಯಾಕ್ಷರಕ್ಕೆ ಸಹಿ ನೀಡಿ ಆಶೀರ್ವದಿಸಿದ ಕರ್ಕಿ ಶ್ರೀಗಳು