ಜಿಟಿಜಿಟಿ ಸುರಿಯುವ ಮಳೆಯಲ್ಲೂ ಚಪ್ಪರ ಕಟ್ಟುವ, ಮಂಟಪ ತಯಾರಿಸುವ, ಬಣ್ಣದ ಬ್ಯಾಗಡೆ ಅಂಟಿಸುವ ಕಾರ್ಯ ಜೋರಾಗಿ ನಡೆದಿದೆ. ಗಣೇಶ ಚತುರ್ಥಿ ಹಬ್ಬಕ್ಕೆ ಎರಡು ದಿನ ಬಾಕಿಯಿವೆ.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಗಣೇಶನ ಮೂರ್ತಿಗೆ ಅಂತಿಮ ಸ್ಪರ್ಶ ನೀಡುವ ಕೆಲಸ ಭರಾಟೆಯಲ್ಲಿ ಸಾಗಿದೆ. ಕಲಾಕಾರರಿಗೆ ಈಗ ಬಿಡುವಿಲ್ಲದ ಕೆಲಸ. ಗಣೇಶೋತ್ಸವ ಮಂಡಳಿಗಳು ಪೆಂಡಾಲ್ ಕಟ್ಟಿ, ಮಂಟಪ ಶೃಂಗರಿಸಿ, ಏಕದಂತನನ್ನು ತಂದು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸಿವೆ.
ಜನರ ನಡುವಿನ ಸಣ್ಣ-ಪುಟ್ಟ ವೈಮನಸ್ಸನ್ನು ಅಳಿಸುವ ಶಕ್ತಿ ಗಣೇಶನಿಗಿದೆ. ಊರಿನ ಹಿರಿಯರು, ಯುವಕರು ಒಂದೆಡೆ ಸೇರಿ ವಾರದ ಮೊದಲಿನಿಂದ ಸಾರ್ವಜನಿಕ ಗಣಪತಿ ಕೂಡಿಸುವ ಸ್ಥಳವನ್ನು ಅಣಿಗೊಳಿಸುತ್ತಾರೆ. ಎರಡು ದಿನಗಳಿಂದ ಸುರಿಯುತ್ತಿರುವ ಮಳೆ ಹಬ್ಬದ ಸಿದ್ಧತೆಗೆ ಸಣ್ಣ ತೊಡಕಾಗಿದೆ.
ಮೂರ್ತಿ ತಯಾರಿ ಮಾಡುವವರಿಗೆ ಕೊರೋನಾ ಸಂಕಷ್ಟ
ಗಣೇಶ ಹಬ್ಬ ಹತ್ತಿರ ಬರುತ್ತಿದ್ದು, ಕೊರೊನಾ ಕಾರಣದಿಂದ ಗಣೇಶನ ಮೂರ್ತಿಯನ್ನು ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ಮೂರ್ತಿಯನ್ನು ತಯಾರು ಮಾಡುವವರು ಸಂಕಷ್ಟದಲ್ಲಿ ಸಿಲುಕಿದ್ದಾರೆ.
ಕೊರೊನಾ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದರಿಂದ ಎಲ್ಲಾ ಉದ್ಯಮಗಳ ಮೇಲೆ ಆರ್ಥಿಕ ಬಿಕ್ಕಟ್ಟನ್ನು ತಂದೊಡ್ಡಿದೆ. ಇದೀಗ ವಿಘ್ನ ನಿವಾರಕ ಗಣಪತಿ ಮೂರ್ತಿ ಕೆಲಸಗಾರರಿಗೂ ಸಂಕಷ್ಟ ಎದುರಾಗಿದ್ದು, ಈ ಬಾರಿ ಗಣಪತಿ ಮೂರ್ತಿಗಳಿಗೆ ಬೇಡಿಕೆ ಕುಸಿದಿದೆ.
ಗಣಪತಿ ಮೂರ್ತಿ ತಯಾರಿಕೆಯ ಬೇಡಿಕೆ ಇಳಿಯುತ್ತಿದ್ದು, ಇದರ ಪರಿಣಾಮ ಮೂರ್ತಿ ತಯಾರಕರ ಮೇಲೆ ಆಗುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೀಗ ಚತುರ್ಥಿಗೆ ಇರುತಿದ್ದ ಮೂರ್ತಿಗಳ ಬೇಡಿಕೆ ದೊಡ್ಡ ಮಟ್ಟದಲ್ಲಿ ಇಳಿದಿದೆ.
ಹಿಂದೆ ಒಂದು ಚಿಕ್ಕ ಗಣಪತಿಗೆ ಮೂರ್ತಿಗೆ 1,000 ರೂ. ದಿಂದ ಆಕೃತಿಗೆ ಅನುಸಾರವಾಗಿ 5,000 ರೂ ಇರುತಿತ್ತು. ಇನ್ನು ದೊಡ್ಡ ಗಣಪತಿಗೆ ಐವತ್ತು ಸಾವಿರದಿಂದ ಎರಡು ಲಕ್ಷ ರೂ. ವರೆಗೆ ಆಕಾರದ ಮೇಲೆ ದರ ನಿಗದಿಯಾಗುತಿತ್ತು. ಆದರೇ ಇದೀಗ ದರವು ಅರ್ಧದಷ್ಟು ಇಳಿದಿದೆ. ಜೊತೆಗೆ ಬೇಡಿಕೆಯು ಸಹ ಇಳಿದಿದೆ.