ಬೈಕ್ ಗೆ ಡಿಕ್ಕಿ ಹೊಡೆದ ಕಂಟೇನರ್…!
ಕಾರವಾರ : ನಗರದ ಬಿಣಗಾದ ವಕ್ಕಲಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರರಿಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ನಡೆದಿದೆ. ಬಳಿಕ ಸ್ಥಳೀಯರು ಪೊಲೀಸ್ ಇಲಾಖೆಯ 112 ಸಹಾಯವಾಣಿಗೆ ಕರೆ ಮಾಡಿದ್ದರಿಂದ ಸ್ಥಳಕ್ಕೆ ಬಂದ ಪೊಲೀಸರು ಬಂದು ಗಾಯಾಳುಗಳಿಗೆ ತಕ್ಷಣ ಕಾರವಾರದ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಬೈಕ್ ಸವಾರರಿಗೆ ಡಿಕ್ಕಿ ಹೊಡೆದ ಕಂಟೇನರ್ ಲಾರಿ ಸ್ಥಳದಿಂದ ಪರಾರಿಯಾಗಿದ್ದು ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ. ಈ ಬಗ್ಗೆ ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಳ್ಳಕ್ಕೆ ಬಿದ್ದು ಗಾಯಗೊಂಡ ವ್ಯಕ್ತಿ
ಜೊಯಿಡಾ: ಹಳ್ಳಕ್ಕೆ ಹಾಕಲಾದ ಕಾಲುಸಂಕದಿಂದ ಯುವಕನೊಬ್ಬ ಕಾಲು ಜಾರಿ ಹಳ್ಳಕ್ಕೆ ಬಿದ್ದು, ಗಾಯಗೊಂಡ ಘಟನೆ ತಾಲೂಕಿನಲ್ಲಿ ನಡದಿದೆ. ನಂತರ ಸ್ಥಳೀಯರು ತುಂಬಿ ಹರಿಯುತ್ತಿದ್ದ ಕರಂಜೆ ಹಳ್ಳದಲ್ಲಿ ಹೊತ್ತುಕೊಂಡು ಹಳ್ಳ ದಾಟಿಸಿ ಗೋವಾ ಆಸ್ಪತ್ರೆಗೆ ಕರೆದಿಕೊಂಡು ಹೋಗಿದ್ದಾರೆ. ಗಾಯಗೊಂಡ ವ್ಯಕ್ತಿ ರಾಘವೇಂದ್ರ ಕಾಲೇಕರ ಎಂದು ಗುರುತಿಸಲಾಗಿದೆ. ಈತ ಡಿಗ್ಗಿಯ ನಿವಾಸಿಯಾಗಿದ್ದು ಈತ ಗೋವಾದಲ್ಲಿ ಕೆಲಸ ಮಾಡುತ್ತಿದ್ದ.
ಗಣೇಶ ಚತುರ್ಥಿ ಹಬ್ಬಕ್ಕೆ ತನ್ನ ಊರಿಗೆ ಗೊವಾದಿಂದ ಬರುತ್ತಿರುವ ವೇಳೆ ಕಾಲು ಸಂಕ ದಾಟುತ್ತಿರುವ ವೇಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದು,ಸೊಂಟ, ಕಾಲು ಮುರಿದಿದೆ ಎಂದು ತಿಳಿದು ಬಂದಿದೆ.
ಬೀದಿ ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ
ಅಂಕೋಲಾ ಪಟ್ಟಣದಲ್ಲಿ ಬೀದಿ ನಾಯಿಗಳು ಹೆಚ್ಚುತ್ತಿರುವುದರಿಂದ ಇವುಗಳ ಸಂಖ್ಯೆ ನಿಯಂತ್ರಿಸುವುದಕ್ಕಾಗಿ ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಲು ಜಿಲ್ಲಾಡಳಿತದಿಂದ ಟೆಂಡರ್ ಆಗಿದ್ದು, ಅದಕ್ಕೆ ಸಂಬಂಧಿಸಿದಂತೆ ಹೊರ ರಾಜ್ಯದ ಸಿಬ್ಬಂದಿಗಳು ಆಗಮಿಸಿದ್ದಾರೆ. 20ಕ್ಕೂ ಅಧಿಕ ಶ್ವಾನಗಳನ್ನು ಹಿಡಿದು ಪುರಸಭೆಯ ಕಸ ವಿಲೇವಾರಿ ಘಟಕದ ಆವರಣದಲ್ಲಿರುವ ಕಟ್ಟಡದಲ್ಲಿ ಸಂಗ್ರಹಿಸಲಾಗಿದೆ.
ಇಬ್ಬರು ವೈದ್ಯರಿದ್ದು, ಸಂತಾನ ಹರಣ ಚಿಕಿತ್ಸೆ ಮಾಡಿ ಎರಡು ದಿನಗಳ ನಂತರ ಪುನಃ ಪರೀಕ್ಷೆಗೆ ಒಳಪಡಿಸಿ ಅದರ ಆರೋಗ್ಯವನ್ನು ದೃಢ ಪಡಿಸಿಕೊಂಡು ಬಿಡಲಾಗುತ್ತಿದೆ. ಪಟ್ಟಣದಲ್ಲಿ 800 ರಿಂದ 1000ರಷ್ಟು ಬೀದಿ ನಾಯಿಗಳಿದ್ದು, ಹಂತ ಹಂತವಾಗಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಎರಡು ತಿಂಗಳು ಗಡುವು ನೀಡಿದ್ದಾರೆ. ಅವರಿಗೆ ಪುರಸಭೆ ಕಟ್ಟಡದಲ್ಲಿಯೇ ವಸತಿಗೆ ವ್ಯವಸ್ಥೆ ಕಲ್ಪಿಸಿದ್ದಾರೆ.
ನಾಯಿಗಳಿಗೂ ಕೂಡ ಆಹಾರದ ವ್ಯವಸ್ಥೆ ಮಾಡಲಾಗಿದೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದ್ದರಿಂದ ಜಿಲ್ಲಾಡಳಿತ ಸಂತಾನ ಹರಣ ಚಿಕಿತ್ಸೆಗೆ ಟೆಂಡರ್ ನೀಡಿದೆ. ಈಗಾಗಲೇ ತಮ್ಮ ಕಾರ್ಯ ನಿರ್ವಹಿಸುತ್ತಿದ್ದು, ಅವರಿಗೆ ಬೇಕಾದ ಎಲ್ಲ ಸೌಕರ್ಯಗಳನ್ನು ಪುರಸಭೆ ವತಿಯಿಂದಲೇ ಒದಗಿಸಲಾಗುತ್ತಿದೆ.