ಸೆಪ್ಟೆಂಬರ್ 15 ರ ತನಕ ಮಳೆ
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಸೆಪ್ಟೆಂಬರ್ 15 ರ ತನಕ ಮಳೆ ಮುಂದುವರೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಸೆಪ್ಟೆಂಬರ್ 15 ರ ವರೆಗೂ ಭಾರಿ ಮಳೆಯಾಗಲಿದ್ದು, ಈ ನಿಟ್ಟಿನಲ್ಲಿ 7 ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಕರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಅಧಿಕ ಮಳೆಯಾಗಲಿದೆ. ಹಾಗೆಯೇ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗಾದಲ್ಲೂ ಸಹ ಹೆಚ್ಚು ಮಳೆಯಾಗಲಿದ್ದು ಅಲ್ಲಿಯೂ ಕೂಡ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವದರಿoದ ರಾಜ್ಯದ ಹಲವೆಡೆ ಮಳೆಯ ಅಬ್ಬರ ಮುಂದುವರೆಯಲಿದೆ.
ಕರಡಿ ದಾಳಿ ವ್ಯಕ್ತಿಗೆ ಗಂಭೀರ ಗಾಯ
ಕರಡಿ ದಾಳಿ ನಡೆಸಿದ ಪರಿಣಾಮ ದನಗಾಹಿ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಬಾಚಣಕಿ ಗ್ರಾಮದ ಡ್ಯಾಂ ಹತ್ತಿರ ಸಂಭವಿಸಿದೆ. ಜೇನುಮುರಿ ಗೌಳಿ ದಡ್ಡಿಯ ನಿವಾಸಿ ಬಾಳು ಕೊಕ್ರೆ ಕರಡಿ ದಾಳಿಯಿಂದ ಗಾಯಗೊಂಡವನಾಗಿದ್ದಾನೆ. ಎಂದಿನಂತೆ ದನಗಳನ್ನು ಮೇಯಿಸಿಕೊಂಡ ಬರುತ್ತಿದ್ದ ಬಾಳು ದನಗಳನ್ನು ಮೇಯಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಏಕಾಏಕಿ ಕರಡಿ ದಾಳಿ ನಡೆಸಿ ತಲೆ, ತೊಡೆ ಹಾಗೂ ವಿವಿಧ ಭಾಗಗಳಲ್ಲಿಪರಚಿ ಕಚ್ಚಿ ಗಾಯಗೊಳಿಸಿದೆ. ಈ ಸಂದರ್ಭದಲ್ಲಿ ಚೀರಾಡುತ್ತ ತನ್ನ ಕೈಯಲ್ಲಿದ್ದ ಕುಡುಗೋಲನ್ನು ಬೀಸುತ್ತಾ ತನ್ನ ಪ್ರಾಣ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿರುವ ಸಂದರ್ಭದಲ್ಲಿ ಅಲ್ಲಿ ನಾಯಿಯೊಂದು ಬೊಗುಳುತ್ತಾ ಬಂದಿರುವುದರಿಂದ ಕರಡಿಯು ತನ್ನ ಮರಿಯ ರಕ್ಷಣೆಗಾಗಿ ಓಡಿಹೋಗಿದೆ.
ಇದರಿಂದಾಗಿ ದನಗಾಹಿ ಬಚಾವವಾಗಿದ್ದಾನೆ ಎಂದು ಹೇಳಲಾಗುತ್ತಿದೆ. ಗಾಯಾಳುವನ್ನು 108 ವಾಹನದಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ. ಈ ವೇಳೆ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಬಳೂರ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಚಾಲಕ ಭೀಮಪ್ಪ ಬಾರಕೇರ ಆಸ್ಪತ್ರೆಗೆ ಸೇರಿಸಲು ಸಹಕರಿಸಿದ್ದಾನೆ. ಅರಣ್ಯ ಇಲಾಖೆಯ ಸಿಬ್ಬಂದಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.
ಕಡಲತೀರದ ಮರಳಿನಲ್ಲಿ ಹೂತುಹೋದ ಕಾರು.
ನಗರದ ರವೀಂದ್ರನಾಥ ಟಾಗೋರ್ ಕಡಲತೀರದ ಮರಳಿನಲ್ಲಿ ಕಾರು ಹೂತು ಹೋದ ಪರಿಣಾಮ ಕಾರು ಮೇಲೆತ್ತಲು ಪ್ರವಾಸಿಗರು ಹರಸಾಹಸ ಪಟ್ಟ ಘಟನೆ ನಡೆದಿದೆ. ಕುಷ್ಟಗಿಯಿಂದ ಬಂದ ನಾಲೈದು ಪ್ರವಾಸಿಗರಿದ್ದ ಕಾರು ನೇರವಾಗಿ ಟಾಗೋರ ಕಡಲ ತೀರಕ್ಕೆ ನುಗ್ಗಿಸಿದ್ದಾರೆ.
ಕಡಲ ತೀರದಲ್ಲಿ ಮರಳಿನ ಅಂದಾಜು ಗ್ರಹಿಸದ ಚಾಲಕ ಸಮುದ್ರದ ಬಳಿಯವರೆಗೂ ಕಾರು ಒಯ್ದ ಕಾರಣದಿಂದ ಮರಳಿನಲ್ಲಿ ಹೂತು ಹೋಗಿದೆ. ಬಳಿಕ ಚಾಲನೆ ಮಾಡಿ ಕಾರು ಎಬ್ಬಿಸಲು ಶತಾಯಗತಾಯ ಪ್ರಯತ್ನಿಸಿದ್ದರೂ ಸಾಧ್ಯವಾಗಿಲ್ಲ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸ್ಥಳೀಯರ ಸಹಾಯದಿಂದ ಕಾರು ಮೇಲೆತ್ತಲಾಯಿತು.