ಕುಮಟಾ: ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ತಾಲೂಕಿನ ಪ್ರಸಿದ್ದ ಪ್ರಮುಖ ಕಡಲತೀರಗಳಲ್ಲಿ ದಂಡ ಪ್ರಕ್ರಿಯಾ ಸಂಹಿತೆ 1973 ರ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ, ಮೀನುಗಾರಿಕೆಗೆ ಹೊರತುಪಡಿಸಿ ಉಳಿದ ಚಟುವಟಿಕೆಗಳನ್ನು ಅಕ್ಟೋಬರ್‌ 9ರ ವರೆಗೆ ಸಂಪೂರ್ಣ ಸ್ಥಗಿತಗೊಳಿಸಬೇಕು ಎಂದು ತಹಸೀಲ್ದಾರ ವಿವೇಕ ಶೇಣ್ವಿ ಆದೇಶಿಸಿದ್ದಾರೆ.

ಅವರು ಈ ಕುರಿತು ಪ್ರಕಟಣೆ ನೀಡಿ, ಕುಮಟಾ ಪೊಲೀಸ್ ಠಾಣೆ ವ್ಯಾಪ್ತಿಯ ಬಾಡ, ಗುಡೇಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ ಹಾಗೂ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಓಂ ಬೀಚ್, ಕುಡ್ಲೆ ಬೀಚ್, ಮೇನ್ ಬೀಚ್ ಮತ್ತು ಹಾಪ್ ಮೂನ್ ಬೀಚ್‌ಗಳು ಆಕರ್ಷಣೀಯ ಪ್ರವಾಸಿ ತಾಣಗಳಾಗಿದ್ದು, ದಿನಂಪ್ರತಿ ಸಾವಿರಾರು ಪ್ರವಾಸಿಗರು ಆಗಮಿಸಿ, ಕಡಲ ಸೌಂದರ್ಯಗಳನ್ನು ಸವಿಯುತ್ತಾರೆ. ಹೀಗೆ ಬಂದವರಲ್ಲಿ ಕೆಲ ಪ್ರವಾಸಿಗರು ಆಕಸ್ಮಿಕವಾಗಿ ಸಮುದ್ರ ಅಲೆಗೆ ಸಿಲುಕಿ ಅಥವಾ ಈಜಲು ಸಮುದ್ರದಲ್ಲಿ ಇಳಿದು ಅಲೆಯ ಸೆಳೆತಕ್ಕೆ ಪ್ರಾಣ ಕಳೆದುಕೊಳ್ಳುತ್ತಿರುವುದು ಪೊಲೀಸ್ ಇಲಾಖಾ ವರದಿಯಿಂದ ತಿಳಿದು ಬಂದಿದೆ.

ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ 2010 ನೇ ಸಾಲಿನಿಂದ ಈವರೆಗೂ ಬೀಚ್‌ಗಳಲ್ಲಿ ಈಜಲು ಹೋಗಿ ಹಾಗೂ ಆಕಸ್ಮಿಕ ಸಮುದ್ರದ ಅಲೆ ಅಪ್ಪಳಿಸಿ ಮುಳಗಿ ಮೃತಪಟ್ಟ ಪ್ರಕರಣಗಳ ಅಂಕಿ-ಅಂಶ ಮಾಹಿತಿಯಂತೆ 2020 ಡಿಸೆಂಬರ್ ವರೆಗೆ ಸುಮಾರು 67 ಮತ್ತು 2021 ಜನೆವರಿಯಿಂದ ಈವರೆಗೆ ಸುಮಾರು 9 ಜನರು ಸಮುದ್ರದಲ್ಲಿ ಮುಳುಗಿ ಪ್ರಾಣ ಕಳೆದುಕೊಂಡಿದ್ದಾರೆ.

RELATED ARTICLES  ರೋಗರುಜಿನೆ ತಡೆಗಟ್ಟಲು ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಡಿ.ಸಿ ಸೂಚನೆ.

ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎಂಬುದು ಕಳವಳಕಾರಿ ಸಂಗತಿಯಾಗಿದೆ. ತಾಲೂಕಿನ ಬೀಚ್‌ಗಳಲ್ಲಿ ಘಟಿಸಿದ ಅಸಹಜ, ಅಸ್ವಾಭಾವಿಕ ದುರ್ಮರಣಗಳ ಪ್ರಕರಣಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೇ ಆಗಿದ್ದಾರೆ. ಪ್ರವಾಸಕ್ಕೆಂದು ಬಂದ ಪ್ರವಾಸಿಗರು ಸಮುದ್ರದ ಉಬ್ಬರ-ಇಳಿತಗಳ ಅಲೆಯ ಕುರಿತು ತಿಳಿಯದೇ ಹಾಗೂ ಸಮುದ್ರದ ಆಳದ ಕುರಿತು ಮಾಹಿತಿ ಇರದೇ ಈಜಾಡಲು ಹೋಗಿ ಸಮುದ್ರದ ಅಲೆಯ ಸೆಳೆತಕ್ಕೆ ಸಿಲುಕಿ ಮುಳಗಿ ಸಾವನ್ನಪ್ಪುತ್ತಿದ್ದಾರೆ.

ಈ ಎಲ್ಲ ಬೀಚ್‌ಗಳಲ್ಲಿ ಮುನ್ನೆಚ್ಚರಿಕಾ ಸೂಚನಾ ಫಲಕಗಳು, ಲೈಫ್ ಗಾರ್ಡ್‌ಗಳನ್ನು ಕರ್ತವ್ಯಕ್ಕೆ ನೇಮಿಸಿದ ಅವಧಿಯಲ್ಲಿ ಅವರಿಗೆ ಅತ್ಯಾಧುನಿಕ ಜೀವ ರಕ್ಷಕ ಸಲಕರಣೆಗಳು ಇರದಿರುವುದು ಮತ್ತು ಲೈಫ್ ಗಾರ್ಡ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಕರ್ತವ್ಯಕ್ಕೆ ನೇಮಿಸದೇ ಇರುವುದರಿಂದ ಎಲ್ಲ ಬೀಚ್‌ಗಳಲ್ಲಿ ನಿಗಾವಣೆ ಅಸಾಧ್ಯವಾಗಿದೆ. ಹಾಗೂ ಸಮುದ್ರದ ಕೆಲವು ಪ್ರದೇಶಗಳು ಹೆಚ್ಚು ಅಪಾಯಕಾರಿ ಸ್ಥಳವಾಗಿದ್ದು ಅಂತಹ ಸ್ಥಳವನ್ನು ಯಾವುದೇ ಪ್ರವಾಸಿಗರು, ಸಾರ್ವಜನಿಕರು ಪ್ರವೇಶಿಸಲು ನಿರ್ಬಂಧಿತ ಸ್ಥಳವನ್ನಾಗಿ ಘೋಷಿಸಿ ಸೂಚನಾ ಫಲಕ ಅಳವಡಿಸಲಾಗುವುದು.

RELATED ARTICLES  ಕಾಣೆಯಾಗಿದ್ದಾರೆ.

ತಾಲೂಕಿನ ಬೀಚ್‌ಗಳಲ್ಲಿ ಘಟಿಸಿದ ಅಸಹಜ, ಅಸ್ವಾಭಾವಿಕ ದುರ್ಮರಣಗಳ ಪ್ರಕರಣಗಳ ಕುರಿತು ಸಂಬಂಧಿಸಿದ ಕಂದಾಯ ಇಲಾಖಾ, ಪೊಲೀಸ್ ಇಲಾಖಾ, ಸ್ಥಳೀಯ ಸಂಸ್ಥೆ, ಪ್ರವಾಸೋದ್ಯಮ ಇಲಾಖಾ ಅಧಿಕಾರಿಗಳು ಮತ್ತು ಬೀಚ್‌ಗಳಿಗೆ ಲಗ್ತಿರುವ ರೆಸಾರ್ಟ್ ಮಾಲೀಕರಿಗೆ ಪ್ರವಾಸಿಗರ ಆಕಸ್ಮಿಕ ಮರಣಗಳ ಹಾಗೂ ಅಹಿತಕರ ಘಟನೆಯನ್ನು ತಪ್ಪಿಸಲು ಸಲಹೆ- ಸೂಚನೆಯನ್ನು ಪಾಲಿಸುವ ಬಗ್ಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಅಲ್ಲದೇ ತಾಲ್ಲೂಕಿನ ಪುರಸಭೆ ಹಾಗೂ ಗ್ರಾಮ ಪಂಚಾಯಯತ ಬೀಚ್‌ಗಳಾದ ಬಾಡ, ಗುಡೇಅಂಗಡಿ, ಕಾಗಾಲ, ಅಘನಾಶಿನಿ, ಧಾರೇಶ್ವರ, ಓಂ ಬೀಚ್, ಕುಡ್ಲೆ ಬೀಚ್, ಮೇನ್ ಬೀಚ್ ಮತ್ತು ಹಾಪ್ ಮೂನ್ ಬೀಚ್‌ಗಳಲ್ಲಿ ಸೆ. 10 ರಿಂದ ಅ. 9, ರ ವರೆಗೆ 30 ದಿನಗಳು ದಂಡ ಪ್ರಕ್ರಿಯಾ ಸಂಹಿತೆ ಕಲಂ 144 ರಂತೆ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.