ಅಂಕೋಲಾ : ಒಂದೆಡೆ ಅಡಿಕೆಗೆ ಬಂದಿರುವ ಕೊಳೆರೋಗ ,ಇತ್ತೀಚಿಗೆ ಕಾಡಿದ ನೆರೆಹಾವಳಿ ಇನ್ನಿತರೆ ಕಾರಣಗಳಿಂದ ರೈತರಿಗೆ ಫಸಲು ದೊರೆಯುವುದೇ ಕಷ್ಟವಾಗಿದ್ದು,ಒಂದೊಮ್ಮೆ ಫಸಲು ದೊರೆತರು ಕಳ್ಳಕಾಕರಿಂದ ರಕ್ಷಿಸುವುದು ಸವಾಲಿನ ಕೆಲಸವಾಗಿದೆ.ಅಡಿಕೆಗೆ ಹೆಚ್ಚುತ್ತಿರುವ ಬೇಡಿಕೆಯಿಂದ ಮುಂದೆ ಬೆಲೆ ಹೆಚ್ಚಳವಾಗುವ ಸಾಧ್ಯತೆಯೂ ಇದ್ದು,ಕಳ್ಳರ ವಕ್ರದೃಷ್ಟಿ ಅಡಿಕೆ ಮೇಲೆ ಬೀಳುವಂತಾಗಿದೆ.
ತಾಲೂಕಿನ ಗ್ರಾಮೀಣ ಭಾಗವಾದ ನೆವಳಸೆಯಲ್ಲಿ ಅಡಿಕೆ ಕದಿಯಲು ಹೋದ ಆರೋಪದಡಿ ಇಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದ ಘಟನೆ ವರದಿಯಾಗಿದೆ.ನೆವಳಸೆಯ ಆನಂದು ನಾಯ್ಕ ಮತ್ತು ಚಂದುಮಠದ ಮಾರುತಿ ಗೌಡ ಬಂಧಿತ ಆರೋಪಿಗಳಾಗಿದ್ದಾರೆ.. ಆನಂದು ನಾಯ್ಕ, ಕಳ್ಳತನ ನಡೆದ ಮನೆಯ ಪಕ್ಕದ ನಿವಾಸಿಯಾದ್ದು ಇನ್ನೋರ್ವ ಆರೋಪಿ ಮಾರುತಿ ಗೌಡ, ಕಳುವಾಗಿದ್ದ ಮಾಲೀಕನ ಹೊಸ ಮನೆಯ ನಿರ್ಮಾಣದಲ್ಲಿ ಕೆಲಸಗಾರನಾಗಿ ಈ ಹಿಂದೆ ಕಾರ್ಯನಿರ್ವಹಿಸಿದ್ದ ಎನ್ನಲಾಗಿದೆ.
ರೈತನೊಬ್ಬ ತನ್ನ ತೋಟದ ಅಡಿಕೆ ಗಳನ್ನು ಸಂಗ್ರಹಿಸಿ ಮನೆಯ ಮುಂಭಾಗದಲ್ಲಿ ಇಟ್ಟಿದ್ದ. ರಾತ್ರಿ ವೇಳೆ ಆತನಿಗೆ ಅರಿವಿಲ್ಲದಂತೆ ಅಡಿಕೆ ಚೀಲಗಳನ್ನು ಕಳ್ಳರು ಕದ್ದೊಯ್ದಿದ್ದರು. ತನ್ನ ಮನೆಯಲ್ಲಿದ್ದ ಅಡಿಕೆ ಕಳ್ಳತನವಾಗಿರುವ ಕುರಿತು ಮಾಲಕ ನೀಡಿದ್ದ ದೂರಿನನ್ವಯ ತನಿಖೆ ಕೈಗೊಂಡ ಪೋಲಿಸರು, ಕೆಲ ಸಾಕ್ಷಾಧಾರಗಳನ್ನು ಕಲೆಹಾಕಿ, ಈರ್ವರು ಶಂಕಿತರನ್ನು ವಿಚಾರಣೆ ಮಾಡಿ, ಪುನಃ ಮನೆಗೆ ಕಳುಹಿಸಿದ್ದು, ತದನಂತರವೂ ಅವರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ಮತ್ತೆ ಗುರುವಾರ ತಡರಾತ್ರಿ ಮನೆಯ ಮುಂಭಾಗದಲ್ಲಿ ಸಂಗ್ರಹಿಸಿಟ್ಟ ಅಡಿಕೆ ಚೀಲಗಳಲ್ಲಿ ಹಲವು ಚೀಲಗಳನ್ನು ಕದ್ದೊಯ್ದಿದ್ದರು. ನೆವಳಸೆಯ ಮಾದೇವ ಹುಲಿಯಾ ಗೌಡ ಎನ್ನುವವರ ಮುಕ್ತಾಯ ಹಂತದಲ್ಲಿರುವ ಮನೆಯಲ್ಲಿ ಮುಂಬಾಗಿಲನ್ನು ಅಳವಡಿಸಿರಲಿಲ್ಲ, ಖಚಿತ ಸುಳಿವಿನ ಆಧಾರದ ಮೇಲೆ ಆರೋಪಿತರು ಕದ್ದ ಅಡಿಕೆ ಮಾರಾಟ ಮಾಡುವ ಯತ್ನ ನಡೆಸಿರುವಾಗಲೇ, ಅವರನ್ನು ಬಂಧಿಸಿದ ಪೊಲೀಸರು ಆರೋಪಿತರಿಂದ 1 ಕ್ಷಿಂಟಾಲ 38 ಕೆ.ಜಿ ತೂಕದ ಅಡಿಕೆ ಹಾಗೂ , ಅಡಿಕೆ ಸಾಗಾಟಕ್ಕೆ ಬಳಸಿದ ಹಳೆಯ ಕಾರ್ ಒಂದನ್ನು ವಶಪಡಿಸಿಕೊಂಡಿದ್ದಾರೆ.
ಸಿಪಿಐ ಸಂತೋಷ ಶೆಟ್ಟಿ, ಪಿ.ಎಸೈ ಪ್ರವೀಣ ಕುಮಾರ, ಅಪರಾಧ ವಿಭಾಗದ ಹವಾಲ್ದಾರ ಮೋಹನದಾಸ ಶೇಣ್ವಿ, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಭಗವಾನ ಗಾಂವಕರ, ಶೇಖರ ಸಿದ್ಧಿ, ಪರಮೇಶ, ಚಾಲಕ ಜಗದೀಶ ನಾಯ್ಕ ಸೇರಿದಂತೆ ಇತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.