ಹೊನ್ನಾವರ: ಸೇತುವೆ ನಿರ್ಮಾಣಕ್ಕಾಗಿ ಮೂರು ವರ್ಷಗಳ ಹಿಂದೆ ಪಿಲ್ಲರ್‌ ಅಳವಡಿಸಿದರೂ ಈವರೆಗೆ ತಾಲೂಕಿನ ಸಾಲೋಡದ ಸೇತುವೆ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ತಾತ್ಕಾಲಿಕ ಸಂಪರ್ಕದ ಕೊಂಡಿಯಾಗಿರುವ ಅಡಿಕೆ ದಬ್ಬೆಯ ಮೇಲೆ ಮಕ್ಕಳು, ಗ್ರಾಮಸ್ಥರು ಪ್ರತಿನಿತ್ಯ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದ್ದು, ಮಳೆಗಾಲದಲ್ಲಿ ಇವರ ಸಂಕಷ್ಟ ಹೇಳತೀರದಾಗಿದೆ.

ಮೂರು ವರ್ಷದ ಹಿಂದೆ ಸಾಕ್ಕೋಡ ಗ್ರಾಮಕ್ಕೆ ಸಂಪರ್ಕಿಸಲು ಸೇತುವೆ ಮಂಜೂರಾಗಿ, 2018ರಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ಮೂರೇ ತಿಂಗಳಲ್ಲಿ ಪಿಲ್ಲರ್‌ ಕೂಡ ನಿರ್ಮಾಣ ಮಾಡಲಾಗಿತ್ತು. ಆದರೆ ನಂತರದಲ್ಲಿ ಗುತ್ತಿಗೆದಾರ ಮಾಯವಾಗಿದ್ದು, ಈವರೆಗೂ ಸೇತುವೆ ಕಾಮಗಾರಿ ಮುಗಿಸಿಲ್ಲ.

ಈ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು, ನೂರಾರು ಜನರು ಪ್ರತಿ ದಿನ ಪಟ್ಟಣಕ್ಕೆ ಹೋಗಬೇಕು ಎಂದರೆ ಈ ಮಾರ್ಗದ ಮೂಲಕವೇ ಸಾಗಬೇಕು. ಸೇತುವೆ ಆಗದ ಕಾರಣ ಚಿಕ್ಕಪುಟ್ಟ ವಾಹನ ಸಹ ಈ ಭಾಗದಲ್ಲಿ ಸಂಚರಿಸುವುದಿಲ್ಲ. ಹೀಗಾಗಿ ಶಾಲಾ ಮಕ್ಕಳು, ಗ್ರಾಮದವರು ಓಡಾಡಲು ಪಿಲ್ಲರ್‌ಗಳ ಮೇಲೆ ಅಡಿಕೆ ಮರದ ಸಂಕ ನಿರ್ಮಿಸಿಕೊಂಡು ಅದರಲ್ಲೇ ಸಾಗುತ್ತಿದ್ದಾರೆ. ಮಳೆಗಾಲವಾದ್ದರಿಂದ ಸಂಕದ ಕೆಳಭಾಗದಲ್ಲಿ ಹಳ್ಳವು ಕೂಡ ತುಂಬಿ ಹರಿಯುತ್ತಿದ್ದು, ಕೆಲವೊಮ್ಮೆ ಹಳ್ಳದಲ್ಲಿ ಪ್ರವಾಹ ಬಂದು ಓಡಾಡದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.

RELATED ARTICLES  ಮಾ ೪: ‘ಹಣತೆ’ ಜೊಯಿಡಾ (ಸೂಪಾ) ತಾಲೂಕು ಘಟಕ ಉದ್ಘಾಟನೆ

ಅಪೂರ್ಣಗೊಂಡಿರುವ ಸೇತುವೆಯನ್ನು ಪೂರ್ಣಗೊಳಿಸಿಕೊಡಿ ಎಂದು ಸಂಬಂಧಪಟ್ಟ ಇಲಾಖೆಗೆ, ಶಾಸಕರಿಗೆ ಮನವಿ ನೀಡಿ- ದರೂ ಈವರೆಗೂ ಯಾವುದೇ ಕಾರ್ಯ ಪ್ರಾರಂಭವಾಗಿಲ್ಲ. ಹೀಗಾಗಿ ಈ ಬಾರಿ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಯನ್ನು ಇಲ್ಲಿನ ಜನ ಭಹಿಷ್ಕರಿಸಲು ಮುಂದಾಗಿದ್ದಾರೆ ಎಂದು ಸ್ಥಳೀಯರ ಮಾತುಗಳಿಂದ ತಿಳಿದುಬಂದಿದೆ.

RELATED ARTICLES  ಹೊನ್ನಾವರದಲ್ಲಿ ಓರ್ವನಿಗೆ ಕೊರೋನಾ ದೃಢ : ಏರಿದ ಸೋಂಕಿತರ ಸಂಖ್ಯೆ

ಗ್ರಾಮ ಪಂಚಾಯಿತಿಯಿಂದ ಇತ್ತೀಚಿಗೆ ಅಲ್ಪ ಹಣ ಹಾಕಿ ಅಡಿಕೆ ಮರದ ಸಂಕ ನಿರ್ಮಿಸಿಕೊಟ್ಟಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ಸಹ ಈ ಭಾಗಕ್ಕೆ ಬಂದು ಸಮಸ್ಯೆ ಆಲಿಸಿ ಹೋಗಿದ್ದಾರೆ. ಆದರೆ ಯಾವುದೇ ಪ್ರತಿಫಲ ಮಾತ್ರ ದೊರೆಯುತ್ತಿಲ್ಲ ಎನ್ನುವುದು ಗ್ರಾಮಸ್ಥರ ಆರೋಪವಾಗಿದೆ.

ಮಳೆ ಹೆಚ್ಚಾದ ವೇಳೆಯಲ್ಲಿ ನೀರು ಉಕ್ಕಿ ಹರಿಯುವಾಗ ಒಂದೊಮ್ಮೆ ಸಂಕದಿಂದ ಕಾಲು ಜಾರಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಹೀಗಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವಾಗ ಆತಂಕದಿಂದಲೇ ಕಳುಹಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಧಿಕಾರಿಗಳು ಈ ಬಗ್ಗೆ
ಗಮನಹರಿಸಿ ಗ್ರಾಮದ ಜನರ ಸಮಸ್ಯೆಯನ್ನು ಬಹೆಹರಿಸಿಕೊಡಬೇಕಿದೆ.