ಕುಮಟಾ : ಕಡಲತೀರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ ನಂತರದಲ್ಲಿಯೂ ಸಾವಿನ ಸರಣಿ ಮುಂದುವರೆದಿದೆ. ಸ್ನೇಹಿತರ ಜೊತೆ ಪ್ರಸಿದ್ದ ವನ್ನಳ್ಳಿ ಬೀಚ್ ಗೆ ಶಿರಸಿ ಮೂಲದ ವಕೀಲರೊಬ್ಬರು ಭೇಟಿ ನೀಡಿದ್ದರು. ಈ ವೇಳೆ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿ ತೊಡಗಿದ್ದರು. ಬೃಹತ್ ಅಲೆಗಳು ಬಂದು ಅಪ್ಪಳಿಸುತ್ತಿದ್ದ ಬಂಡೆಯಮೇಲೆ ಧ್ಯಾನದಲ್ಲಿ ಕುಳಿತಂತೆ ಪೋಸ್ ನೀಡಲು ಮುಂದಾಗಿದ್ದಾಗ ಸಮುದ್ರ ಪಾಲಾದ ಘಟನೆ ವರದಿಯಾಗಿದೆ.
ಬಂಡೆಯ ಮೇಲೆ ತಪಸ್ಸಿಗೆ ಕುಳಿತಂತೆ ಇದ್ದಾಗ ಭಾರೀ ಗಾತ್ರದ ಅಲೆಯೊಂದು ಬಂದು ಅಪ್ಪಳಿಸಿದ ಪರಿಣಾಮ ಬಂಡೆಯ ಮೇಲೆ ಕುಳಿತಿದ್ದವರು ನೀರು ಪಾಲಾಗಿದ್ದಾರೆ. ಮೃತರನ್ನು ವಕೀಲಿ ವೃತ್ತಿಯನ್ನು ಮಾಡುತ್ತಿದ್ದ ಶಿರಸಿಯ ಸುಬ್ರಹ್ಮಣ್ಯ ಗೌಡ ಎಂದು ಗುರುತಿಸಲಾಗಿದೆ.
ಜಿಲ್ಲೆಯ ಕಡಲತೀರದಲ್ಲಿ ಇತ್ತೀಚೆಗೆ ಪ್ರವಾಸಿಗರು ಮೋಜು ಮಸ್ತಿಗಾಗಿ ಸಮುದ್ರಕ್ಕೆ ಇಳಿದು ಸಾವನ್ನಪ್ಪುವ ಘಟನೆಗಳು ಹೆಚ್ಚುತ್ತಿದೆ. ಹೀಗಾಗಿ ಕಡಲಿಗಿಳಿಯದಂತೆ ಎಚ್ಚರಿಸಲಾಗುತ್ತಿದೆ. ಆದರೂ ಪ್ರವಾಸಕ್ಕೆ ಬರುವ ಪ್ರವಾಸಿಗರು ಮನಸೋ ಇಚ್ಚೆ ವರ್ತಿಸುತ್ತಾ, ಅಪಾಯದ ಮುನ್ಸೂಚನೆ ಅರಿತು ಬೇಕಾಬಿಟ್ಟಿಯಾಗಿ ಫೋಟೋಕ್ಕೆ ಫೋಸ್ ಕೊಡಲು ಮುಂದಾಗಿ ಜೀವ ಕಳೆದುಕೊಳ್ಳುತ್ತಿರುವುದು ದುರಂತವೇ ಸರಿ.
ಈ ಬಗ್ಗೆ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸ್ ತನಿಖೆ ಮುಂದುವರೆದಿದೆ.