ಹೊನ್ನಾವರ: ಚಿಟ್ಟಾಣಿ ರಾಮಚಂದ್ರ ಹೆಗಡೆ ಅಭಿಮಾನಿ ಬಳಗ ಹೊಸಾಕುಳಿ ಹಾಗೂ ಸುಬ್ರಹ್ಮಣ್ಯ ಚಿಟ್ಟಾಣಿಯವರ ಕುಟುಂಬ ನಡೆಸಿಕೊಟ್ಟ ಚಿಟ್ಟಾಣಿ ಪ್ರಶಸ್ತಿ ಪ್ರದಾನ ಸಮಾರಂಭ ಅವರ ಹುಟ್ಟೂರು ಹೊಸಾಕುಳಿ ಲಕ್ಷ್ಮೀನಾರಾಯಣ ಸಭಾಂಗಣದಲ್ಲಿ ನೆರವೇರಿತು. ಚಿಟ್ಟಾಣಿಯವರ ಸಂಸ್ಮರಣಾರ್ಥ ಅವರ ಪ್ರಶಸ್ತಿಯನ್ನು ಲಯಬ್ರಹ್ಮ ಖ್ಯಾತ ಭಾಗವತ ಶ್ರೀ ಸುಬ್ರಾಯ ಹೆಗಡೆ ಕಪ್ಪೆಕೆರೆ ಅವರಿಗೆ ಪ್ರದಾನ ಮಾಡಲಾಯಿತು. 10000 ರೂ ನಗದು ಶಾಲು, ಸ್ಮರಣಿಕೆ, ಸನ್ಮಾನ ಪತ್ರಗಳನ್ನು ಒಳಗೊಂಡಿದ್ದ ಪ್ರಶಸ್ತಿಯನ್ನು ಗಣ್ಯರು ಅವರಿಗೆ ಅರ್ಪಿಸಿ ಗೌರವಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀಯುತ ಸುಬ್ರಹ್ಮಣ್ಯ ಚಿಟ್ಟಾಣಿಯವರು ಚಿಟ್ಟಾಣಿಯವರು ಅಭಿಮಾನಿಗಳನ್ನು ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿದವರು ಅವರ ಅಭಿಮಾನಿಗಳಿಂದಲೇ ಈ ಪ್ರಶಸ್ತಿ ನೀಡಲ್ಪಡುತ್ತಿರುವುದು ಸಂತಸ ತಂದಿದೆ. ಈ ಪರಂಪರೆ ಮುಂದುವರಿಯಬೇಕು ಹಾಗೂ ಇದಕ್ಕೆ ನಾನು ಹಾಗೂ ಕುಟುಂಬ ಸದಾ ಬೆಂಗಾವಲಾಗಿ ನಿಲ್ಲುತ್ತದೆ ಎಂದರು.
ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀ ಸುನೀಲ ನಾಯ್ಕರವರು ಕಲೆ-ಮತ್ತು ಕಲಾವಿದರನ್ನು ಬಿಟ್ಟು ನಾವಿಲ್ಲ. ಅವರಿಗಾಗಿ ಹೆಗಲಿಗೆ ಹೆಗಲು ಕೊಡಲು ನಾನು ಸದಾ ಬದ್ಧ ಎಂದು ಮಾತನಾಡಿ ಭಾಗವತರಿಗೆ ಪ್ರಶಸ್ತಿ ನೀಡಿರುವುದನ್ನು ಶ್ಲಾಘಿಸಿದರು.

ದಿವ್ಯ ಆತಿಥ್ಯ ವಹಿಸಿದ್ದ ಶಿವರಾಮ ಭಟ್ಟ ಅಲೇಖ ಅಭಿಜಾತ ಕಲಾವಿದ ಚಿಟ್ಟಾಣಿಯವರ ಸಾಧನೆಯನ್ನು ಯಕ್ಷಗಾನ ಹಿಂದಿನಿಂದ ನಡೆದು ಬಂದ ದಾರಿಯನ್ನು ಸ್ಮರಿಸಿ ಮಾತನಾಡಿದರು. ಜಿಲ್ಲಾಪಂಚಾಯತ ಸದಸ್ಯರಾದ ಶ್ರೀಯುತ ಶಿವಾನಂದ ಹೆಗಡೆಯವರು ಯಕ್ಷಗಾನಕ್ಕೆ ಚಿಟ್ಟಾಣಿ ಕುಟುಂಬ ನೀಡಿದ ಕೊಡುಗೆ ಅಪಾರ. ಹೊಸಾಕುಳಿಯಲ್ಲಿ ಸಣ್ಣ ಸಣ್ಣ ಹಿಡುವಳಿದಾರರಾದರೂ ಕಲೆ ಸಂಸ್ಕೃತಿಯ ಜೊತೆಗೆ ಒಳ್ಳೆಯ ಬದುಕು ಮಾಡುತ್ತಾರೆಂದು ಅಭಿಪ್ರಾಯ ಪಟ್ಟರು.

ಶ್ರೀ ವೆಂಕಟರಮಣ ಹೆಗಡೆ ಕವಲಕ್ಕಿ ಇವರು ಮಾತನಾಡಿ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಎಲ್ಲರೂ ಸೇರಿ ಇನ್ನೂ ಅದ್ಧೂರಿಯಾಗಿ ನಡೆಸುವ ದಿನ ಬರಲಿ. ಇದಕ್ಕಾಗಿ ಚಿಟ್ಟಾಣಿ ಕುಟುಂಬದವರ ಜೊತೆಗೆ ನಾನು ಸದಾ ಇರುವೆನೆಂದು ಭರವಸೆ ನೀಡಿದರು. ಕೋಟದಿಂದ ಆಗಮಿಸಿದ ಹಿರಿಯ ಕಲಾ ಸಾಹಿತಿ ಶ್ರೀ ಹೆಚ್ ಜನಾರ್ದನ ಹಂದೆ ಅಮೃತೇಶ್ವರಿ ಮೇಳದಲ್ಲಿ ಟ್ರಂಪ್ ಕಾರ್ಡ ಆಗಿದ್ದ ಚಿಟ್ಟಾಣಿಯವರನ್ನು ಸ್ಮರಿಸಿ ತಮ್ಮ ಸ್ವ ರಚಿತ ಕವನವನ್ನು ಸುಶ್ರಾವ್ಯವಾಗಿ ಹಾಡಿದರು. ಶ್ರೀ ಸತ್ಯನಾರಾಯಣ ಭಟ್ಟ ಶುಂಠಿ ಬಚ್ಚಗಾರು ಮಾತನಾಡಿ ಯಕ್ಷಗಾನ ಕಂಡ ಅಪ್ರತಿಮ ನಟ ರಾಮಚಂದ್ರ ಹೆಗಡೆಯವರು ಮತ್ತು ತಮ್ಮ ನಡುವಿನ ಅಪೂರ್ವ ಒಡನಾಟದ ದಿನಗಳನ್ನು ನೆನೆಪಿಸಿಕೊಂಡರು. ಖ್ಯಾತ ನ್ಯಾಯವಾದಿಗಳಾದ ಶ್ರೀ ಸತೀಶ ಭಟ್ಟ ಉಳಗೆರೆ ಅವರು ಚಿಟ್ಟಾಣಿ ರಂಗರಾಜನಾಗಿ ದಶಕ ದಶಕಗಳ ಕಾಲ ಮೆರೆದು ಇನ್ನೂ ಜನಮನದಲ್ಲಿ ಹಸಿರಾಗಿದ್ದಾರೆ ಉಸಿರಾಗಿದ್ದಾರೆ ಎಂದು ಅಭಿಪ್ರಾಯ ಪಟ್ಟರು.

RELATED ARTICLES  ಕಲಾಸಿರಿ ರಂಗಭೂಮಿ ಸಾಂಸ್ಕೃತಿಕ ಜನಪದ ಹಾಗೂ ಕ್ರೀಡಾವೇದಿಕೆ ಉದ್ಘಾಟನೆ.

ಶ್ರೀ ನಾರಾಯಣ ಭಟ್ಟ ಮೇಲಿನಗಂಟಿಗೆ ಇವರು ಮಾತನಾಡಿ ದಿ|| ಶಿವರಾಮ ಹೆಗಡೆ ಕೆರೆಮನೆ ಇವರ ಪಾತ್ರಗಳನ್ನು ನೋಡುತ್ತಾ ನೋಡುತ್ತಾ ತನ್ನ ಸ್ವಂತಿಕೆಯೊಂದಿಗೆ ಚಿಟ್ಟಾಣಿ ರಾಷ್ಟ್ರಮಟ್ಟದ ಮೇರು ಕಲಾವಿದರಾದರು. ಹೀಗಿದ್ದರೂ ಅವರು ನಿಗರ್ವಿಯಾಗಿ ಜನಮನ ಗೆದ್ದರು ಎಂದು ಅಭಿಪ್ರಾಯ ಪಟ್ಟರೆ ವಿ|| ದತ್ತಮೂರ್ತಿ ಭಟ್ಟ ಸಾಗರ ಮಾತಿಗಿಂತ ಕೃತಿ ಮೇಲು ಚಿಟ್ಟಾಣಿಯವರ ಬಗೆಗಾಗಿ ತಾವು ಕುಟುಂಬದ ಜೊತೆಗೆ ಯಾವಾಗಲೂ ಬರಲು ಸಿದ್ಧ. ಆಗಬೇಕಾದ ಕಾರ್ಯಗಳು ಮತ್ತೂ ಇವೆ. ಅವು ಶೀಘ್ರಾತಿ ಶೀಘ್ರ ಚಾಲನೆಗೊಳ್ಳಲಿ ಎಂದರು. ಶ್ರೀಯುತ ಸಿ.ಜಿ ಹೆಗಡೆ ಯಲ್ಲಾಪುರ ಅವರು ಚಿಟ್ಟಾಣಿಯ ಮುಗ್ಧತೆಯ ಬಗೆಗಾಗಿ ಮಾತನಾಡಿ ಚಿಟ್ಟಾಣಿಯವರ ಬಗೆಗೇ ತಮ್ಮ ಮಗಳು ಸಂಶೋಧನಾ ಪ್ರಬಂಧ ಮಂಡಿಸಿ ಯಶಸ್ಸು ಸಾಧಿಸಿದ್ದನ್ನು ಸ್ಮರಿಸಿಕೊಂಡರು. ಚಿಟ್ಟಾಣಿಯವರ ಕಲಾಮಂದಿರ ಮತ್ತು ಪ್ರತಿಮೆಗಳು ಕನಸಾಗಿಯೇ ಉಳಿದಿವೆ. ಅದು ನನಸಾಗುವ ಹತ್ತಿರ ಬರಲಿ ಎಂದು ಆಶಿಸಿದರು. ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀಯುತ ರಾಮಚಂದ್ರ ಭಟ್ಟ ಮಾತನಾಡುತ್ತಾ ಚಿಟ್ಟಾಣಿಯವರ ಜೊತೆಗಿನ ಕೊನೆಯ ಪ್ರಸಂಗಳನ್ನು ನೆನಪಿಸಿಕೊಂಡರು. ಈ ಇಳಿ ವಯಸ್ಸಿನಲ್ಲಿ ವೇಷ ಮಾಡುವುದು ಬೇಡ ಎಂದರೂ ಚಿಕ್ಕ ಮಕ್ಕಳಂತೆ ಹಟ ಮಾಡುತ್ತಿದ್ದರು. ಕಲೆಯ ಬಗೆಗಿನ ಅವರ ಅದಮ್ಯ ಉತ್ಸಾಹ ಮರೆಯಲಾಗದ್ದು ಎಂದರು.

RELATED ARTICLES  ಉತ್ತರ ಕನ್ನಡ ಜಿಲ್ಲೆಯಲ್ಲಿ ಮಂಗನಕಾಯಿಲೆಗೆ ಮೊದಲ ಸಾವು.

ಅಭಿನಂದನಾ ನುಡಿಗಳನ್ನಾಡಿದ ಸಾಹಿತಿ-ಶಿಕ್ಷಕ ಶ್ರೀ ಸಂದೀಪ ಭಟ್ಟ ಸಾಧನೆಯ ನಂತರದ ಆತ್ಮಾನಂದವೇ ಜೀವನಕ್ಕೆ ಸ್ಫೂರ್ತಿಯಾಗಿ ಸಾಗುತ್ತದೆ. ಚಿಟ್ಟಾಣಿಯವರ ಕಲಾಪೂಜೆಯ ಮಹಾಪ್ರಸಾದ ಪ್ರಶಸ್ತಿಯ ರೂಪದಲ್ಲಿ ಇಂದು ಭಾಗವತರಿಗೆ ನೀಡಲ್ಪಟ್ಟಿದೆ. ಸಂಶೋಧಕರೂ ಸಾಧಕರೂ ಆದ ಸುಬ್ರಾಯ ಭಾಗವತರಿಗೆ ರಾಮಚಂದ್ರ ಹೆಗಡೆಯವರ ಪ್ರಶಸ್ತಿ ಸಂದಿರುವುದು ನಿಜವಾಗಿಯೂ ಹೆಮ್ಮೆತರುವ ಸಂಗತಿ ಎಂದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಬ್ರಾಯ ಹೆಗಡೆಯವರು ನಾನು ಜೀವನದಲ್ಲಾದ ದುರ್ಘಟನೆಯಿಂದ ಕಂಠತ್ರಾಣವನ್ನು ಕಳೆದುಕೊಂಡರೂ ಭಗವಂತನ ದಯೆ ಹಾಗೂ ಅಭಿಮಾನಿಗಳ ಆಶೀರ್ವಾದದಿಂದ ಇಂದು ಇಷ್ಟಾದರೂ ಮಾತನಾಡುವ ಹಾಗೆ ಭಾಗವತಿಕೆ ಮಾಡುವ ಹಾಗೆ ಆಗಿದೆ. ನನ್ನ ಕಾರ್ಯಕ್ಕೆ ತಾವು ನೀಡಿದ ಗೌರವ ನಿಜವಾಗಿಯೂ ಸಂತಸ ತಂದಿದೆ. ಶಾಸಕರು ಸದಾ ಯಕ್ಷಗಾನ ಕಲೆಯ ಹಾಗೂ ಕಲಾವಿದರ ಪರವಾಗಿ ಕೆಲಸ ಮಾಡುವಂತಾಗಲಿ ಎಂದು ಮೆಚ್ಚುಗೆಯ ಮಾತುಗಳನ್ನಾಡಿದರು. ಕುಮಾರಿ ಪೂಜಿತಾ ಹೆಗಡೆ ಸ್ವಾಗತಿಸಿದರೆ ಶ್ರೀಯುತ ಸುಬ್ರಹ್ಮಣ್ಯ ಚಿಟ್ಟಾಣಿ ವಂದಿಸಿದರು. ನಂತರ ಶ್ರೀ ಕಾರ್ತಿಕ ಚಿಟ್ಟಾಣಿಯವರ ನೇತೃತ್ವದಲ್ಲಿ ಮಾಗಧವಧೆ ಎಂಬ ಯಕ್ಷಗಾನ ಪ್ರದರ್ಶಿತಗೊಂಡಿತು.