ಕಾರವಾರ : ತಾಲೂಕಿನ ಮಾಜಾಳಿ ಸಮುದ್ರದ ತೀರದಲ್ಲಿ ಟೈಗರ್ ಶಾರ್ಕ್ ನ ಕಳೇಬರ ಪತ್ತೆಯಾಗಿದೆ. ಪತ್ತೆಯಾಗಿರುವುದು ಹೆಣ್ಣು ಟೈಗರ್ ಶಾರ್ಕ್ ನ ಕಳೇಬರವೆಂದು ವರದಿಯಾಗಿದೆ. ಇದು ಸರಿ ಸುಮಾರು 2 ಮೀಟರ್ ಉದ್ದವಿದ್ದು ಸುಮಾರು 30 ಕೆ.ಜಿ. ತೂಕ ಹೊಂದಿದೆ ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಟೈಗರ್ ಶಾರ್ಕ್ 600 ಕೆ.ಜಿ. ಹಾಗೂ ಆರು ಮೀಟರ್ ವರೆಗೂ ಬೆಳೆಯುತ್ತದೆ. ಇವುಗಳು 30 ರಿಂದ 40 ವರ್ಷದ ವರೆಗೆ ಜೀವಿಸುತ್ತವೆ ಎನ್ನಲಾಗಿದೆ. ಇದು ಸಮುದ್ರದ ಬಲಿಷ್ಠ ಮೀನುಗಳಲ್ಲಿ ಒಂದಾಗಿದೆ. ತಿಮಿಂಗಲ, ಮನುಷ್ಯರು ಸೇರಿದಂತೆ ಇನ್ನಿತರ ಸಮುದ್ಯಜೀವಿಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ. ಟೈಗರ್ ಶಾರ್ಕ್ ಈಗ ಅಳಿವಿನ ಅಂಚಿನಲ್ಲಿರುವ ಮೀನು ಎಂದೂ ಗುರುತಿಸಲ್ಪಟ್ಟಿದೆ.
ಮೀನು ಪ್ರಿಯರು ಬಗೆ ಬಗೆಯ ಮೀನನ್ನು ಇಷ್ಟ ಪಡುವರಾದರೂ ಈ ಮೀನನ್ನು ಇಲ್ಲಿನ ಜನರು ಇಷ್ಟಪಡದ ಕಾರಣ ಕಡಲತೀರದಲ್ಲಿ ಹಾಗೇ ಬಿಡಲಾಗಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಟೈಗರ್ ಶಾರ್ಕ್ ಗೆ ಭಾರೀ ಬೇಡಿಕೆ ಇದ್ದು ಇದರ ಸೂಪ್ ಮಾಡಿ ಅಲ್ಲಿನ ಜನರು ಸೇವನೆ ಮಾಡುತ್ತಾರೆ ಎಂದು ಕಾರವಾರದ ಕಡಲಜೀವ ವಿಜ್ಞಾನ ಅಧ್ಯಯನ ಕೇಂದ್ರದ ಪ್ರಾಧ್ಯಾಪಕರು ಅಭಿಪ್ರಾಯ ಪಟ್ಟಿದ್ದಾರೆ.
ಕಾರವಾರದಲ್ಲಿ ಈ ಹಿಂದೆಯೂ ಅಳಿವಿನಂಚಿನ ಮೀನುಗಳು ಶವವಾಗಿ ಪತ್ತೆಯಾಗಿತ್ತು, ಇದೀಗ ಈ ಶಾರ್ಕ ಮೀನಿನ ಶವ ಪತ್ತೆಯಾಗಿದ್ದು ಸಾವಿಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.