ಹೊನ್ನಾವರ : ಉತ್ತರಕನ್ನಡದ ಹಲವೆಡೆ ದೇವಾಲಯದ ಕಳ್ಳತನ ಪ್ರಕರಣಗಳು ವರದಿಯಾಗುತ್ತಿತ್ತಾದರೂ ಕಳೆದ ಕೆಲ ದಿನಗಳಿಂದ ಈ ತರಹ ಪ್ರಕರಣ ತಗ್ಗಿದ್ದವು. ಇದೀಗ ತಾಲೂಕಿನ ಪುರಾಣ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಜಲವಳ್ಳಿ ಗ್ರಾಮದ ಕಾನಗೋಡದಲ್ಲಿರುವ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಕಳ್ಳತನ ನಡೆದ ಬಗ್ಗೆ ವರದಿಯಾಗಿದೆ. ಕಳ್ಳರು ದೇವಾಲಯದಲ್ಲಿ ಎರಡು ಕಾಣಿಕೆ ಹುಂಡಿ ಹಾಗೂ ದೇವಾಲಯದಲ್ಲಿದ್ದ ಗಂಟೆಗಳನ್ನು ಕಳ್ಳರು ಕದ್ದೊಯ್ದಿರುವುದಾಗಿ ವರದಿ ತಿಳಿಸಿದೆ.
ಈ ದೇವಾಲಯದಲ್ಲಿ ಪ್ರತೀ ವರ್ಷ ನಡೆಯುವ ಅನಂತ ಚತುರ್ದಶಿ ಉತ್ಸವಕ್ಕೆ ನಾಡಿನೆಲ್ಲೆಡೆಯಿಂದ ಸಹಸ್ರಾರು ಭಕ್ತರು ಬಂದು ಹರಕೆ ಪೂಜೆ ಸಲ್ಲಿಸುವುದು ವಾಡಿಕೆ. ಅದರಂತೆ ಈ ವರ್ಷವೂ ದೇವಾಲಯಕ್ಕೆ ಭಕ್ತಾದಿಗಳು ಭೇಟಿ ನೀಡಿ ಶ್ರೀದೇವರಿಗೆ ಪೂಜೆ ಸಲ್ಲಿಸಿದ್ದರು. ಅನಂತ ನೋಪಿ ಸಂಪನ್ನವಾದ ಒಂದು ದಿನದ ನಂತರ ಅಂದರೆ ಮಂಗಳವಾರ ಹಾಡಹಗಲೇ ಕಳ್ಳತನ ಘಟನೆ ನಡೆದಿರುವುದು ವರದಿಯಾಗಿದೆ.
ಮಧ್ಯಾಹ್ನ 1.30 ರಿಂದ 3.30 ಅವಧಿಯಲ್ಲಿ ಕಳ್ಳತನ ನಡೆದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ದೇವಾಲಯದ ಅರ್ಚಕರ ಮನೆ ದೇವಾಲಯದ ಸಮೀಪವೇ ಇದೆಯಾದರೂ ನಿತ್ಯವೂ ಯಾರಾದರೂ ಸ್ಥಳಿಯರು ದೇವಾಲಯಕ್ಕೆ ಭೇಟಿ ನೀಡುತ್ತಿರುತ್ತಾರೆ ಎನ್ನುವ ಕಾರಣಕ್ಕೆ ಮಧ್ಯಾಹ್ನ ದೇವಾಲಯಕ್ಕೆ ಬೀಗ ಹಾಕುತ್ತಿರಲಿಲ್ಲ ಎನ್ನಲಾಗಿದ್ದು, ಈ ಸಮಯದಲ್ಲಿ ಕಳ್ಳರು ತಮ್ಮ ಕೈಚಳಕ ತೋರಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದೇವಾಲಯದ ಆಡಳಿತ ಕಮಿಟಿ ಕಾರ್ಯದರ್ಶಿ ರಾಜು ಹೆಗಡೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಪ್ರಕರಣದ ತನಿಖೆಗೆ ಮುಂದಾಗಿದ್ದಾರೆ.
ನಿತ್ಯವೂ ನೂರಾರು ಭಕ್ತರು ದೇವಾಲಯಕ್ಕೆ ಬೇಟಿ ನೀಡುತ್ತಾರಾದರೂ ಮಧ್ಯಾಹ್ನದ ಪೂಜೆಯ ನಂತರ ದೇವಾಲಯದ ಬಳಿ ಜನರ ಓಡಾಟ ಕಡಿಮೆ ಇರುತ್ತದೆ. ದೇವಾಲಯದ ಕಾಣಿಕೆ ಹುಂಡಿಯನ್ನು ಪ್ರತಿ ತಿಂಗಳ ಒಂದನೇ ತಾರೀಕು ಆಡಳಿತ ಮಂಡಳಿಯವರು ತೆರೆದು ಹಣವನ್ನು ಬರಿದುಮಾಡುತ್ತಾರೆ. ಅನಂತ ಚತುರ್ದಶಿ ದಿನ ಸಹಸ್ರಾರು ಭಕ್ತರು ಭೇಟಿ ನೀಡಿರುವ ಹಿನ್ನಲೆಯಲ್ಲಿ ಕಾಣಿಕೆ ಹುಂಡಿಯಲ್ಲಿ ಹೆಚ್ಚಿನ ಹಣ ಸಂಗ್ರಹವಾಗಿರಬಹುದು ಎನ್ನುವುದನ್ನು, ಮಧ್ಯಾಹ್ನ ಸಮಯದಲ್ಲಿ ದೇವಾಲಯದಲ್ಲಿ ಯಾರೂ ಇರುವುದಿಲ್ಲ ಎನ್ನುವುದನ್ನೆಲ್ಲಾ ಲೆಕ್ಕ ಹಾಕಿಯೇ ಕಳ್ಳರು ದೇವಾಲಯದ ಹುಂಡಿ ಕದ್ದಿದ್ದಾರೆನ್ನುವ ಮಾತು ಕೇಳಿಬರುತ್ತಿದೆ.