ಕುಮಟಾ: ತಾಲೂಕಿನ ಕೋಡ್ಕಣಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶಿಶು ಅಭಿವೃದ್ಧಿ ಯೋಜನೆ ವತಿಯಿಂದ ಪೋಷಣಾ ಮಾಸಾಚರಣೆ ಹಮ್ಮಿಕೊಳ್ಳಲಾಗಿತ್ತು. ಗ್ರಾಮ ಪಂಚಾಯತ್ ಸದಸ್ಯರಾದ ಅಣ್ಣಪ್ಪ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯದರ್ಶಿ ತಿರುಮಲೇಶ್, ಹಾಗೂ ಗ್ರಾಮ ಪಂಚಾಯತ್ ಇತರ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾದ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆಗಳು ಎಲ್ಲರ ಗಮನ ಸೆಳೆಯುವಂತಿತ್ತು. ನೆಲದ ಮೇಲೆ ವಿವಿಧ ಧಾನ್ಯಗಳಿಂದ ಚಿತ್ರಿಸಲಾದ ಇಲಾಖೆಯ ಲಾಂಛನಗಳು ಜನಮೆಚ್ಚುಗೆ ಪಡೆದುಕೊಂಡವು.
ವೈದ್ಯಾಧಿಕಾರಿ ಡಾಕ್ಟರ್ ಶ್ರೇಯಾಂಕ ನಾಯಕ್ ಪೌಷ್ಟಿಕ ಆಹಾರ ಹಾಗೂ ಮಕ್ಕಳು ಆರೋಗ್ಯದ ಬಗ್ಗೆ ಅರಿವು ಮೂಡಿಸಿದರು. ಮಕ್ಕಳ ರಕ್ಷಣಾ ಘಟಕದ ನಂದಿನಿ ಗೌಡರವರು ಮಕ್ಕಳ ರಕ್ಷಣೆ ಹಾಗೂ ದತ್ತು ಕಾಯ್ದೆಗಳ ಬಗ್ಗೆ ಮಾಹಿತಿ ನೀಡಿದರು.
ಆಶಾ ಕಾರ್ಯಕರ್ತೆ ವಾಸಂತಿ ಅಂಬಿಗ ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕಿ ಶ್ರೀಮತಿ ಸುಧಾ ಹೆಗಡೆ ಪ್ರಾಸ್ತಾವಿಕ ಮಾತನಾಡಿದರು. ವಿದ್ಯಾವತಿ ಪಟಗಾರ ಕಾರ್ಯಕ್ರಮ ನಿರೂಪಣೆ ಮಾಡಿದರು. ಭಾರತಿ ಪಟಗಾರ ಸ್ವಾಗತಿಸಿದರು. ತಿರುಪತಿ ಭಂಡಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಹಾಗೂ ಸಹಾಯಕಿಯರು ಇನ್ನಿತರ ಸಾರ್ವಜನಿಕರು ಹಾಜರಿದ್ದರು.