ಕುಮಟಾ: ಜಪಾನಿನ ಓಕಿನೋವ ಎಂಬಲ್ಲಿ ಯುವ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿರುವ ಡಾ. ದೀಪಕ ಭಟ್ ಅವರು ಕೆಲವು ತಿಂಗಳುಗಳಿಂದ ವರ್ಕ್ ಫ್ರಂ ಹೋಮ್ ನಲ್ಲಿದ್ದು ಇದೇ ಸಂದರ್ಭದಲ್ಲಿ ತಾವು ಕಲಿತ ದೀವಳ್ಳಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಶಾಲೆಗೆ ಸುಮಾರು 50 ಸಾವಿರಕ್ಕೂ ಹೆಚ್ಚು ಮೌಲ್ಯದ ಕಂಪ್ಯೂಟರ್ ಮತ್ತು ಪ್ರಿಂಟರ್ ಕೊಡುಗೆಯನ್ನು ನೀಡಿದರು.
ಸರಳ ಸಜ್ಜನಿಕೆ ಸ್ವಭಾವದ ವ್ಯಕ್ತಿ, ಮಗುವಿನಂತ ಮನಸ್ಸು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು, ಎಂಬಂತೆ ಅಪಾರ ಜ್ಞಾನವನ್ನು ಹೊಂದಿರುವಂತಹ ಗ್ರಾಮೀಣ ಪ್ರತಿಭೆ ಇವರಾಗಿದ್ದು ಬಾಲ್ಯದಿಂದಲೂ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿಯಾಗಿ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದರು. ಅಸ್ಸಾಂನ ಗುವಾಹಟಿಯಲ್ಲಿ ಎಂಎಸ್ಸಿ ಪದವಿ ಪಡೆದು ಚೆನ್ನೈ ನಲ್ಲಿ ಪಿ.ಎಚ್.ಡಿ ಪದವಿಯನ್ನು ಗಳಿಸಿ ತಮ್ಮ ವೃತ್ತಿಜೀವನವನ್ನು ಬೆಂಗಳೂರಿನಿಂದ ಪ್ರಾರಂಭಿಸಿ ಮುಂದೆ ಅಮೆರಿಕದಲ್ಲಿ ಕೆಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದರು.
ತಾವು ಕಲಿತ ಶಾಲೆಯಲ್ಲಿ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಪ್ರಾಥಮಿಕ ಹಂತದಿಂದಲೇ ಮೂಡಿಸಬೇಕು ಅದು ಶಿಕ್ಷಕರಿಂದ ಸಾಧ್ಯವಾಗುತ್ತದೆ ಎಂದರು. ಹಾಗೆಯೇ ಸರ್ಕಾರಿ ಶಾಲೆಗಳ ಮಹತ್ವವನ್ನು, ಭವಿಷ್ಯತ್ತಿನ ಗುರಿಯನ್ನು ತಲುಪಲು ಸತತ ಪರಿಶ್ರಮದಿಂದ ಮಾತ್ರ ಸಾಧ್ಯ ಎಂಬುದನ್ನು ಈ ಮಟ್ಟಕ್ಕೆ ಬೆಳೆಯಲು ಸಹಾಯಕರಾಗಿರುವಂತಹ ಶಿಕ್ಷಕ ಬಳಗವನ್ನ ನೆನಪಿಸಿಕೊಂಡರು.
ಮುಖ್ಯ ಶಿಕ್ಷಕಿ ಜಿ.ಜಿ.ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಶಿಕ್ಷಕ ರವಿನಾಯ್ಕ ಮಾತನಾಡಿದರು. ಶ್ಯಾಮಲಾ ಅನಂತ ನಾಯ್ಕ ವಂದಿಸಿದರು. ಕೋಮಲ ನಾಯ್ಕ, ಜಯ ವೆಂಕ್ಟ ನಾಯ್ಕ ಇದ್ದರು.