ಕುಮಟಾ : ತಾವು ಬೆಳೆದ ಬೆಳೆಗೆ ಬೆಲೆ ಬರುತ್ತಿದೆ ಎಂಬ ಸಮಾಧಾನ ಒಂದೆಡೆಯಾದರೆ ಇನ್ನೊಂದೆಡೆ ರೈತರಿಗೆ ಬೆಳೆ ಹಾನಿಯ ಸಮಸ್ಯೆ ಕಾಡುತ್ತಿದೆ. ಈ ವರ್ಷ ಮಳೆಯ ಏರುಪೇರು ಕೃಷಿಕರನ್ನು ಗೊಂದಲಕ್ಕೀಡು ಮಾಡಿದೆ. ಜುಲೈ, ಆಗಸ್ವ್ ತಿಂಗಳಲ್ಲಿ ಭರ್ಜರಿ ಮಳೆ ಸುರಿದಿದೆ. ಇನ್ನೊಂದೆಡೆ ಬಹುಪಾಲು ದಿನಗಳಲ್ಲಿ ಅಲ್ಪ ಪ್ರಮಾಣದಲ್ಲಿ ಮಳೆ ಬಿದ್ದಿದೆ. ಈಗ ಸೆಪ್ಟೆಂಬರ್ ನಲ್ಲಿ ಕಡಿಮೆಯಾಗಬೇಕಾದ ಮಳೆ ಸಾಕಷ್ಟು ಜೋರಾಗಿದೆ.
ಕುಮಟಾ, ಹೊನ್ನಾವರ, ಶಿರಸಿ, ಸಿದ್ದಾಪುರ, ಯಲ್ಲಾಪುರ ತಾಲೂಕಿನ ಅನೇಕ ಕಡೆಗಳಲ್ಲಿ ಜಿಟಿ ಜಿಟಿ ಮಳೆ ಬೀಳುತ್ತಿದೆ. ಇನ್ನೂ ಕೆಲ ಕಡೆಗಳಲ್ಲಿ ದಿನವಿಡೀ ಮಳೆರಾಯ ಆರ್ಭಟ ತೋರುತ್ತಿದ್ದಾನೆ. ಇದು ಈ ಭಾಗದ ಜನಜೀವನ ಆತಂಕ ಎದುರಿಸುವಂತೆ ಮಾಡುತ್ತಿದೆ.
ಮಳೆರಾಯನ ಇಂಥ ಕಣ್ಣಾ ಮುಚ್ಚಾಲೆಯಾಟ ಮುಖ್ಯವಾಗಿ ಅಡಿಕೆ ತೋಟದ ಮೇಲೆ ಕಾರ್ಮೋಡ ಕವಿದಂತಾಗಿದೆ. ಈಗಷ್ಟೇ ಬೆಳೆಯುತ್ತಿರುವ ಅಡಿಕೆ ಕಾಯಿ ಕೊಳೆ ರೋಗಕ್ಕೆ ತುತ್ತಾಗಿ ನೆಲಕ್ಕೆ ಉದುರುವ ಬಗ್ಗೆ ಅನೇಕ ಕೃಷಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಪ್ರತಿ ವರ್ಷ ಮಳೆಗಾಲ ಪ್ರಾರಂಭದೊಂದಿಗೆ ಅಡಿಕೆ ಬೆಳೆಗಾರರಿಗೆ ತೋಟದಲ್ಲಿ ಕೊಳೆ ರೋಗ ವ್ಯಾಪಿಸುವ ಆತಂಕವೂ ಕಾಯಂ ಆಗಿಬಿಟ್ಟಿದೆ. ಆದರೆ ಈ ಬಾರಿ ಬಹುತೇಕ ಕಡೆಗಳಲ್ಲಿ ಇಂತಹ ಆತಂಕ ದೂರವಾಯಿತು ಎನ್ನುವಷ್ಟರಲ್ಲಿ ಈಗ ಮತ್ತೆ ಕಾಣಿಸಿಕೊಂಡ ಮಳೆರಾಯ ಬೆಳೆಗಾರರ ದುಗುಡ ಹೆಚ್ಚಿದಂತಾಗಿದೆ.
ರೈತರಿಗೆ ಮತ್ತೊಮ್ಮೆ ಮದ್ದು ಸಿಂಪಡಿಸಬೇಕೇ ಎಂಬ ಅನುಮಾನದ ಮಧ್ಯೆ ಈ ತಿಂಗಳ ಅಂತ್ಯಕ್ಕೆ ಮಳೆ ಜೋರಾಗಿದೆ, ಈಗ ಮತ್ತೊಮ್ಮೆ ಮಳೆ ಸುರಿಯುತ್ತಿರುವ ಕಾರಣದಿಂದ ಕೊಳೆ ರೋಗದಿಂದ ಅಡಿಕೆ ಕಾಯಿಗಳ ರಕ್ಷಣೆಗೆ ಮೂರನೇ ಬಾರಿ ಮದ್ದು ಸಿಂಪಡಿಸುವ ಬಗ್ಗೆ ಕೂಡ ಬೆಳೆಗಾರರು ಯೋಚಿಸುವಂತಾಗಿದೆ.