ಭಟ್ಕಳ : ದೇವಾಲಯಗಳಲ್ಲಿ ಕಳ್ಳತನ ಪ್ರಕರಣಗಳು ಹಾಗೂ ಮನೆಯಲ್ಲಿ ಕಳ್ಳತನ ಪ್ರಕರಗಳು ಮತ್ತೆ ಮತ್ತೆ ಸುದ್ದಿಯಾಗುತ್ತಿದ್ದು, ಕಳ್ಳರನ್ನು ಪೊಲೀಸರು ಹೆಡೆಮುರಿ ಕಟ್ಟುತ್ತಿರುವ ಘಟನೆಗಳು ನಡೆಯುತ್ತಿದೆ. ಮನೆಯ ಬಾಗಿಲು ಮುರಿದು ಕಳ್ಳತನ ಮಾಡಿದ ಘಟನೆವರದಿಯಾಗಿದೆ.
ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಮನೆ ಬಾಗಿಲು ಮುರಿದು ನಗದು ಹಣ ಹಾಗೂ ಚಿನ್ನಾಭರಣಗಳೊಂದಿಗೆ ಪರಾರಿ ಯಾಗಿರುವ ಘಟನೆ ಭಟ್ಕಳ ತಾಲೂಕಿನ ಕೈಕಿಣಿ ಗ್ರಾಪಂ ಹೆರಾಡಿಯಲ್ಲಿ ನಡೆದಿದ್ದು ಇಂದು ಎಫ್‌ಐಆರ್ ದಾಖಲಾಗಿದೆ.
ಕಳ್ಳತನಕ್ಕೆ ಒಳಗಾದ ಬಾಡಿಗೆ ಮನೆಯಲ್ಲಿ ನಾಗವೇಣಿ ನಾಯ್ಕ ಹಾಗೂ ಅವರ ಕುಟುಂಬದ ಸದಸ್ಯರು ವಾಸವಾಗಿದ್ದರು. ನಾಗವೇಣಿ ನಾಯ್ಕ ಕಳೆದ 3 ದಿನಗಳ ಹಿಂದೆ ಭಟ್ಕಳದಲ್ಲಿರುವ ತಮ್ಮ ತಾಯಿ ಮನೆಗೆ ಬಂದಿದ್ದು, ಮನೆ ಬಾಗಿಲು ತೆರೆದಿರುವುದನ್ನು ನೋಡಿ ಮನೆಯ ಮಾಲಕರು ನಾಗವೇಣಿಯವರಿಗೆ ಮಾಹಿತಿ ನೀಡಿದ್ದಾರೆ. ಕಳ್ಳರು 5 ಸಾವಿರ ನಗದು ಹಾಗೂ ಚಿನ್ನದ ಸರವೊಂದನ್ನು ಅಪಹರಿಸಿದ್ದಾರೆ. ಮುರುಡೇಶ್ವರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.