ಅಪರಿಚಿತ ಮೃತದೇಹ ಪತ್ತೆ
ಹೊನ್ನಾವರ: ಪಟ್ಟಣದ ಬಂದರು ರಸ್ತೆಯ ತುಳಸಿ ಫಾರ್ಮ ಮೆಡಿಕಲ್ ಶಾಪ್ ಎದುರಿನ ಮೆಟ್ಟಿಲಿನ ಮೇಲೆ ಅಪರಿಚಿತ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದೆ. ಸುಮಾರು 45ರಿಂದ 50 ವರ್ಷದ ಅಪರಿಚಿತ ಪುರುಷ ಅನಾರೋಗ್ಯದಿಂದಲೋ ಅಥವಾ ಇನ್ಯಾವುದೆ ಕಾರಣದಿಂದಲೋ ಮೃತಪಟ್ಟಿದ್ದು, ಸದರಿ ಮೃತದೇಹದ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯ ವ್ಯಾಪಾರಿ ನಾಗೇಶ ಪ್ರಭು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪದ್ಮಶ್ರೀ ಸುಕ್ರಿ ಬೊಮ್ಮುಗೌಡ ಆರೋಗ್ಯ ತಪಾಸಣೆ.
ಪದ್ಮಶ್ರೀ ಪುರಸ್ಕ್ರತೆ ಅಂಕೋಲಾದ ಸುಕ್ರಿ ಬೊಮ್ಮುಗೌಡ ಅವರು ಅನಾರೋಗ್ಯದ ನಿಮಿತ್ತ ಕಾರವಾರದ ಕ್ರಿಮ್‌ಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡಿಕೊಂಡರು. ಈ ಸಂದರ್ಭದಲ್ಲಿ ಕ್ರಿಮ್ಸ್ ನಿರ್ದೇಶಕ ಡಾ.ಗಜಾನನ ನಾಯಕ ಅವರನ್ನು ಭೇಟಿಯಾದ ಸುಕ್ರಿ ಬೊಮ್ಮುಗೌಡ ಅವರು ಕೆಲ ಹೊತ್ತು ಅವರೊಂದಿಗೆ ಚರ್ಚಿಸಿದರು.
ನಂತರ ಜಿಲ್ಲಾಸ್ಪತ್ರೆಯ ಸರ್ಜನ ಡಾ.ಶಿವಾನಂದ ಕುಡ್ಕರಕರ, ಡಾ. ಶ್ರೀನಿವಾಸ, ಡಾ. ರೋಶನ ಹಾಗೂ ಡಾ.ಮಾರುತಿ ಅವರು ಸುಕ್ರಜ್ಜಿ ಅವರ ಆರೋಗ್ಯ ತಪಾಸಣೆ ಮಾಡಿದರು.
ಶಿರಸಿಯಲ್ಲಿ ನಾಳೆ ವಿದ್ಯುತ್ ವ್ಯತ್ಯಯ.
ಶಿರಸಿ : ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಶಿಥಿಲಗೊಂಡಿರುವ ವಾಹಕ ಬದಲಾವಣೆ, ಲಿಂಕ್ ಲೈನ್ ಕಾಮಗಾರಿ ಹಾಗೂ ಬನವಾಸಿ ಶಾಖಾ ವ್ಯಾಪ್ತಿಯಲ್ಲಿ ಜಿ.ಓ.ಎಸ್ ಅಳವಡಿಸುವ ಕಾಮಗಾರಿ ಹಮ್ಮಿಕೊಂಡಿರುವ ಕಾರಣ ಶಿರಸಿ 220/11 ಕೆ.ವಿ ಎಸಳೆ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಗ್ರಾಮೀಣ 11 ಕೆ.ವಿ. ಮಾರ್ಗಗಳಾದ ಅಂಡಗಿ, ಭಾಷಿ, ದೊಡ್ನಳ್ಳಿ ಮತ್ತು ಬಿಸಲಕೊಪ್ಪ ಹಾಗೂ ಪಟ್ಟಣ ಶಾಖಾ ವ್ಯಾಪ್ತಿಯ 11 ಕೆವಿ ಕೆ.ಎಚ್.ಬಿ ಮಾರ್ಗದ ಕೆ.ಎಚ್.ಬಿ ಕಾಲೋನಿ, ಮಾರಿಕಾಂಬಾ ನಗರ, ಕಸ್ತೂರಬಾ ನಗರ, ಫಾರೆಸ್ಟ ಕಾಲೋನಿ, ಚಿಪಗಿ, ಬಸಟ್ಟಿಕೇರಿ, ಡಿಪೋ ಹಾಗೂ ನಾರಾಯಣಗುರು ನಗರ ಪ್ರದೇಶಗಳಲ್ಲಿ ಸೆ.25 ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರಿಗೆ ವಿದ್ಯುತ್ ಸರಬರಾಜು ಇರುವುದಿಲ್ಲ. ಕಾರಣ ಗ್ರಾಹಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ), ಹೆಸ್ಕಾಂ, ಶಿರಸಿ ರವರು ತಿಳಿಸಿದ್ದಾರೆ